ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯು ಡೊಂಕಾಗುತ್ತಿದೆ ಎಂದು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿ ಮೋದಿ ಸರ್ಕಾರ ಕೈಗೊಂಡಿರುವ ನಿಲುವನ್ನು ವ್ಯಂಗ್ಯ ಮಾಡಿರುವ ಸುಬ್ರಮಣಿಯನ್ ಸ್ವಾಮಿ, 'ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕೈಗೊಳ್ಳಲಾದ ನಿರ್ಣಯದಿಂದ ದೂರ ಉಳಿದಿದ್ದಲ್ಲದೇ, ರಷ್ಯಾದಿಂದ ರಿಯಾಯಿತಿ ದರದ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿದೆ' ಎಂದಿದ್ದಾರೆ.
'ಚೀನಾ ನಮ್ಮ ನೆಲವನ್ನು ಅಕ್ರಮವಾಗಿ ಕಬಳಿಸಿಕೊಂಡಿದೆ. ಹೀಗಿದ್ದೂ ಅಲ್ಲಿನ ವಿದೇಶಾಂಗ ಸಚಿವರು ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ' ಎಂದು ಸ್ವಾಮಿ ಟ್ವೀಟ್‌ನಲ್ಲಿ ಕೇಂದ್ರ ಸರ್ಕಾರವನ್ನು ತಿವಿದಿದ್ದಾರೆ.
ಚೀನಾ-ಭಾರತದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಚೀನಾದ ವಿದೇಶಾಂಗ ವ್ಯವಹಾರಗಳ ಸಚಿವರು ಭಾರತಕ್ಕೆ ಭೇಟಿ ನೀಡಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
'ನಿಮಗೇನು ಬೇಕು ಎಂಬುದನ್ನು ಸರಿಯಾಗಿ ಹೇಳಿ' ಎಂಬ ಟ್ವಿಟರ್ ಬಳಕೆದಾರರೊಬ್ಬರ ಪ್ರಶ್ನೆಗೆ, 'ಅಂತಹ ಸಭೆಗೂ ಮೊದಲು ಭಾರತ ಮಾತೆಯ ಭೂಮಿ ವಾಪಸ್ ಬೇಕು' ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.