ಬೆಂಗಳೂರು: ತೆಲಂಗಾಣದ ಪಡಿತರ ವಿತರಣಾ ಕೇಂದ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರ ಇಲ್ಲದಿರುವ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗರಂ ಆದ ಘಟನೆಯ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಇದೊಂದು ಚಮಚಾಗಿರಿಯ ಅತ್ಯಂತ ನಾಚಿಕೆಗೇಡಿನ ಪ್ರದರ್ಶನ ಎಂದಿದ್ದಾರೆ.
'ಪಡಿತರ ಕೇಂದ್ರಗಳಲ್ಲಿ ಪ್ರಧಾನಿ ಚಿತ್ರ ಇಲ್ಲದಿರುವ ಬಗ್ಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (ಪಿಡಿಎಸ್)ಕ್ಕೆ ದೂರು ನೀಡಬಹುದಿತ್ತು' ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಕಾಮರೆಡ್ಡಿ ಜಿಲ್ಲೆಯಲ್ಲಿ ಪಡಿತರ ಕೇಂದ್ರಗಳಿಗೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿ ಮೋದಿ ಚಿತ್ರ ಇಲ್ಲದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಡಿತರ ಕೇಂದ್ರಗಳಲ್ಲಿ ವಿತರಿಸುತ್ತಿರುವ ಅಕ್ಕಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟು ಹಣ ನೀಡುತ್ತಿವೆ ಎಂಬ ಬಗ್ಗೆ ವಿವರ ನೀಡುವಂತೆ ಕೇಳಿದ್ದರು.
ಇದಕ್ಕೆ ಪ್ರತಿಯಾಗಿ ಟಿಆರ್‌ಎಸ್ ಕಾರ್ಯಕರ್ತರು ಸಿಲಿಂಡರ್‌ಗಳ ಮೇಲೆ ಪ್ರಧಾನಿ ಮೋದಿ ಚಿತ್ರದ ಜೊತೆಗೆ ಬೆಲೆಯನ್ನು ನಮೂದಿಸಿರುವ ಪೋಸ್ಟರ್ ಅಂಟಿಸಿ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.