ADVERTISEMENT

ಕಾಶಿ, ಮಥುರಾ ದೇವಾಲಯಗಳ ಭೂಸ್ವಾಧೀನಕ್ಕೆ ಸುಬ್ರಮಣಿಯನ್‌ ಸ್ವಾಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 18:30 IST
Last Updated 2 ಡಿಸೆಂಬರ್ 2019, 18:30 IST
ಸುಬ್ರಮಣಿಯನ್‌ ಸ್ವಾಮಿ
ಸುಬ್ರಮಣಿಯನ್‌ ಸ್ವಾಮಿ   

ಲಖನೌ: ವಾರಣಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ಸುತ್ತಲಿನ ದೇವಾಲಯಗಳ ಭೂಮಿಯನ್ನು ಕೇಂದ್ರ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಅವರು ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಹುಟ್ಟಿಹಾಕಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಅಯೋಧ್ಯೆ ಚಳವಳಿ ಮಾದರಿಯಲ್ಲಿ ಆಂದೋಲನ ಆರಂಭಿಸಬೇಕು ಎಂದು ಹೇಳಿದ್ದಾರೆ.

‘ಕಾಶಿ ಮತ್ತು ಮಥುರಾ ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿದ್ದು, ಕೇಂದ್ರವು ಇಲ್ಲಿನ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲೇಬೇಕು. ಮುಸ್ಲಿಂ ಅರಸರ ಆಡಳಿತದ ಅವಧಿಯಲ್ಲಿ ದೇಶದಲ್ಲಿ ನೂರಾರು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ’ ಎಂದು ಸ್ವಾಮಿ ಹೇಳಿದರು.

ADVERTISEMENT

ರಾಮ ಮಂದಿರ ನಿರ್ಮಾಣವಾದ ನಂತರ ಕಾಶಿ ವಿಶ್ವನಾಥ ದೇವಾಲಯ ಮತ್ತು ಶ್ರೀಕೃಷ್ಣ ಜನ್ಮಭೂಮಿಯ ಪಕ್ಕದಲ್ಲಿರುವ ಮಸೀದಿಗಳನ್ನು ಸ್ಥಳಾಂತರಗೊಳಿಸಲು ಆಂದೋಲನವನ್ನು ಪ್ರಾರಂಭಿಸುವುದಾಗಿ ಅಖಿಲ ಭಾರತ ಅಖಾಡ್‌ ಪರಿಷತ್‌ (ಎಐಎಪಿ) ಈಗಾಗಲೇ ಹೇಳಿದೆ.

‘ಉತ್ತರ ಪ್ರದೇಶ ಮತ್ತು ಕೇಂದ್ರದಲ್ಲಿ ಹಿಂದೂ ಪರ ಸರ್ಕಾರಗಳು ಇರುವುದರಿಂದ ಇವೆರಡೂ ಉದ್ದೇಶ ಈಡೇರಿಕೆಗೆ ತೊಂದರೆಯಾಗುವುದಿಲ್ಲ. ಕಾಶಿ ಮತ್ತು ಮಥುರಾ ಹಿಂದೂ ಸಮುದಾಯಕ್ಕೆ ಸೇರಿದ್ದಾಗಿವೆ. ಕೋಮು ಸೌಹಾರ್ದತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಸ್ಲಿಂ ಸಮಾಜದವರು ಕಾಶಿ ಮತ್ತು ಮಥುರಾದಲ್ಲಿನ ತಮ್ಮ ಹಕ್ಕನ್ನು ಹಿಂದಕ್ಕೆ ಪಡೆಯಬೇಕು’ ಎಂದುಎಐಎಪಿಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.