ಬೆಂಗಳೂರು (ಪಿಟಿಐ): ಹಾಕ್–ಐ (ಹಾಕ್–ಎಂಕೆ132) ವಿಮಾನದಿಂದ ‘ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್’ (ಎಸ್‌ಎಎಡಬ್ಲ್ಯು) ಕ್ಷಿಪಣಿಯನ್ನುಒಡಿಶಾ ಕರಾ ವಳಿಯಲ್ಲಿ ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಗಿದ್ದು, ಈ ಮೂಲಕ ಹಿಂದೂಸ್ತಾನ್ ಏರೊನಾಟಿಕ್ಸ್ ಲಿ. (ಎಚ್‌ಎಎಲ್) ಹೊಸ ಮೈಲುಗಲ್ಲು ಸಾಧಿಸಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ರಿಸರ್ಚ್ ಸೆಂಟರ್ ಇಮಾರತ್ (ಆರ್‌ಸಿಐ), ಸ್ವದೇಶಿಯಾಗಿ ಈ ಶಸ್ತ್ರವನ್ನು ಅಭಿವೃದ್ಧಿಪಡಿಸಿದೆ. ಹಾಕ್–ಐ ವಿಮಾನದಿಂದ ಉಡಾವಣೆಗೊಂಡ ಮೊದಲ ಕ್ಷಿಪಣಿ ಇದಾಗಿದೆ ಎಂದು ಪ್ರಕಟಣೆಯಲ್ಲಿ ಎಚ್‌ಎಎಲ್ ತಿಳಿಸಿದೆ. ಈ ಕ್ಷಿಪಣಿಯು 100 ಕಿ.ಮೀ ದೂರದ ಶತ್ರುಗಳ ನೆಲೆಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
‘ಹಾಕ್–ಐ ವಿಮಾನದಿಂದ ನಡೆಸಿದ ಮೊದಲ ಪರೀಕ್ಷೆ ಇದಾಗಿದ್ದು, ಕ್ಷಿಪಣಿಯು ನಿಗದಿತ ಗುರಿಯನ್ನು ತಲುಪಿದೆ. ಎಚ್‌ಎಎಲ್ ಪರೀಕ್ಷಾ ಪೈಲಟ್‌ಗಳಾದ ನಿವೃತ್ತ ವಿಂಗ್ ಕಮಾಂಡರ್‌ಗಳಾದ ಪಿ.ಅವಸ್ತಿ ಹಾಗೂ ಎಂ.ಪಟೇಲ್ ನಿಖರವಾಗಿ ಕ್ಷಿಪಣಿಯನ್ನು ಉಡಾವಣೆ ಗೊಳಿಸಿದರು.
‘ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಎಚ್‌ಎಎಲ್ ಮಹತ್ವ ನೀಡುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಾಕ್-ಐ ಯುದ್ಧ ವಿಮಾನ ಪರಿಣಾಮಕಾರಿ ಬಳಕೆಗೆ ಅನು ಕೂಲ ಆಗಲಿದೆ’ ಎಂದು ಎಚ್‌ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್. ಮಾಧವನ್ ಹೇಳಿದ್ದಾರೆ.
‘ಎಚ್‌ಎಎಲ್ ಅಭಿವೃದ್ಧಿಪಡಿಸಿರುವ ಹಾಕ್–ಐ ಯುದ್ಧ ವಿಮಾನವನ್ನು, ಡಿಆರ್‌ಡಿಒ ಅಭಿವೃದ್ಧಿಪಡಿಸಿದ ತಾಂತ್ರಿಕ ವ್ಯವಸ್ಥೆ ಮತ್ತು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಹೆಚ್ಚಾಗಿ ಬಳಸಲಾಗುತ್ತಿದೆ’ ಎಂದು ಎಚ್‌ಎಎಲ್ ಸಿಎಂಡಿ ತಿಳಿಸಿದರು.
‘ಹಾಕ್–ಐ ವಿಮಾನಕ್ಕೆ ಮತ್ತಷ್ಟು ಕ್ಷಿಪಣಿಗಳನ್ನು ಜೋಡಿಸುವುದರ ಕುರಿತು ಭಾರತೀಯ ಸೇನಾಪಡೆಗಳ ಜೊತೆ ಚರ್ಚಿಸಲಾಗುತ್ತಿದೆ’ ಎಂದು ಎಚ್‌ಎಎಲ್ ತಿಳಿಸಿದೆ. 2017ರ ಗಣರಾಜ್ಯೋತ್ಸವದಂದು ಸ್ವದೇಶಿಯಾಗಿ ಮೇಲ್ದರ್ಜೆಗೆ ಏರಿಸಿದ್ದ ಹಾಕ್–ಎಂಕೆ132 ವಿಮಾನ ವನ್ನು ಎಚ್‌ಎಎಲ್ ಅನಾವರಣಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.