ADVERTISEMENT

ಮಗುವನ್ನು ಕೊಂದ ಪ್ರಕರಣ: ಪ್ರಯಾಣದುದ್ದಕ್ಕೂ ಶಾಂತವಾಗಿದ್ದ ಸುಚನಾ ಸೇಠ್‌

ಮಹಿಳೆ ಬಂಧನಕ್ಕೆ ಪೊಲೀಸರಿಗೆ ನೆರವಾದ ಕಾರು ಚಾಲಕ ಹೇಳಿದ ಸಂಗತಿ

ಪಿಟಿಐ
Published 12 ಜನವರಿ 2024, 13:35 IST
Last Updated 12 ಜನವರಿ 2024, 13:35 IST
ಸುಚನಾ ಸೇಠ್‌
ಸುಚನಾ ಸೇಠ್‌   

ಪಣಜಿ: ನಾಲ್ಕು ವರ್ಷದ ತನ್ನ ಮಗುವನ್ನು ಕೊಂದ ಪ್ರಕರಣದ ಬಂಧಿತ ಆರೋಪಿ, ಕೃತಕ ಬುದ್ಧಿಮತ್ತೆಯ ನವೋದ್ಯಮ ‘ಮೈಂಡ್‌ಫುಲ್‌ ಎ.ಐ ಲ್ಯಾಬ್‌’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಚನಾ ಸೇಠ್‌ ಗೋವಾದಿಂದ ಕರ್ನಾಟಕಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಶಾಂತವಾಗಿದ್ದರು. ಒಂದೇ ಒಂದು ಮಾತು ಕೂಡ ಆಡಿರಲಿಲ್ಲ ಎನ್ನುವ ಸಂಗತಿಯನ್ನು ಅವರ ಬಂಧನಕ್ಕೆ ಪೊಲೀಸರಿಗೆ ನೆರವಾಗಿದ್ದ ಕಾರು ಚಾಲಕ ರೇ ಜಾನ್‌ ತಿಳಿಸಿದ್ದಾರೆ. 

ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾನ್, ‘ಗೋವಾದಿಂದ ಕರ್ನಾಟಕದ ಚಿತ್ರದುರ್ಗ ತಲುಪವರೆಗಿನ 10 ಗಂಟೆಗಳಿಗೂ ಹೆಚ್ಚು ಸಮಯದ ಇಡೀ ಪ್ರಯಾಣದಲ್ಲಿ ಆ ಮಹಿಳೆ ತುಂಬಾ ಶಾಂತವಾಗಿದ್ದರು. ಒಂದೇ ಒಂದು ಮಾತನ್ನೂ ಆಡಲಿಲ್ಲ. ಉತ್ತರ ಗೋವಾದ ಬಿಚೋಲಿಮ್ ಪಟ್ಟಣಕ್ಕೆ ಬಂದಾಗ ನೀರಿನ ಬಾಟಲಿ ತರುವಂತೆ ಹೇಳಿದ್ದರು ಅಷ್ಟೇ’ ಎಂದು ಜಾನ್‌ ಹೇಳಿದ್ದಾರೆ.

‘ಸರ್ವಿಸ್‌ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಸುಚನಾ ಸೇಠ್‌ ಅವರ ಪ್ರಯಾಣಕ್ಕಾಗಿ ನನ್ನ ಕಾರು ಬುಕ್‌ ಮಾಡಿದ್ದರು. ನಾನು ಸ್ಥಳ ತಲುಪಿದಾಗ ಸುಚನಾ ಅವರ ಬ್ಯಾಗ್‌ ಅನ್ನು ರಿಸೆಪ್ಶನ್‌ನಿಂದ ಕಾರಿಗೆ ಸಾಗಿಸಲು ಸೂಚಿಸಿದರು. ಬ್ಯಾಗ್ ತುಂಬಾ ಭಾರವಾಗಿತ್ತು. ಬ್ಯಾಗ್‌ ಹಗುರಾಗಿಸಲು ಕೆಲವು ವಸ್ತುಗಳನ್ನು ತೆಗೆಯಬಹುದೇ ಎಂದು ಕೇಳಿದಾಗ ಅದಕ್ಕೆ ಅವರು ಒಪ್ಪಲಿಲ್ಲ. ಅನಿವಾರ್ಯವಾಗಿ ಬ್ಯಾಗ್‌ ಅನ್ನು ಕಾರಿನವರೆಗೂ ಎಳೆದುಕೊಂಡೇ ಹೋಗಲಾಗಿತ್ತು’ ಎನ್ನುವ ಮಾಹಿತಿಯನ್ನು ಚಾಲಕ ನೀಡಿದ್ದಾರೆ.

ADVERTISEMENT

‘ಸೋಮವಾರ ಬೆಂಗಳೂರಿಗೆ ತೆರಳುತ್ತಿದ್ದಾಗ ಕರ್ನಾಟಕ-ಗೋವಾ ಗಡಿಯಲ್ಲಿರುವ ಚೋರ್ಲಾ ಘಾಟ್ ವಿಭಾಗದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಜಾಮ್‌ ನಿವಾರಣೆಗೆ ಕನಿಷ್ಠ ನಾಲ್ಕು ಗಂಟೆ ಬೇಕಾಗಲಿದೆ ಎನ್ನುವುದು ಪೊಲೀಸರಿಂದ ಗೊತ್ತಾಯಿತು. ಟ್ರಾಫಿಕ್‌ ಸಮಸ್ಯೆ ಬಗೆಹರಿಯಲು ಆರು ಗಂಟೆ ಹಿಡಿಯಲಿದೆ ಎಂದು ನಾನು ಉತ್ಪ್ರೇಕ್ಷಿಸಿ ಹೇಳಿದೆ. ಹಿಂತಿರುಗಿ, ವಿಮಾನ ನಿಲ್ದಾಣಕ್ಕೆ ಹೋಗಬಹುದಲ್ಲವೇ ಎನ್ನುವ ಸಲಹೆ ಕೂಡ ನೀಡಿದೆ. ಆದರೆ, ರಸ್ತೆ ಮೂಲಕವೇ ಪ್ರಯಾಣ ಮುಂದುವರಿಸಲು ಅವರು ಪಟ್ಟುಹಿಡಿದರು’ ಎಂದು ಜಾನ್‌ ಹೇಳಿದರು.

‘ನಂತರ ಗೋವಾ ಪೊಲೀಸರು ನನಗೆ ಕರೆ ಮಾಡಿ, ಕಾರಿನಲ್ಲಿದ್ದ ಮಹಿಳೆ ಮೇಲೆ ಕೆಲ ಸಂಶಯಗಳಿರುವುದಾಗಿ ಎಚ್ಚರಿಸಿದರು. ಹತ್ತಿರದ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆದೊಯ್ಯುವಂತೆಯೂ ಪೊಲೀಸರು ನನಗೆ ತಿಳಿಸಿದ್ದರು. ನಾನು ಐಮಂಗಲ ಪೊಲೀಸ್ ಠಾಣೆ ಕಡೆಗೆ (ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ) ಕಾರು ಚಲಾಯಿಸಿದೆ. ಆಗ, ಕ್ಯಾಲಂಗುಟ್ ಪೊಲೀಸ್ ಅಧಿಕಾರಿಯೊಬ್ಬರು ನನ್ನೊಂದಿಗೆ ಫೋನ್‌ ಕರೆಯಲ್ಲೇ ಇದ್ದರು. ಐಮಂಗಲ ಇನ್ಸ್‌ಪೆಕ್ಟರ್ ಕಾರಿನ ಬಳಿಗೆ ಬರಲು ಸುಮಾರು 15 ನಿಮಿಷ ಆಯಿತು. ಮಹಿಳೆ ಕಾರಿನಲ್ಲಿ ಶಾಂತವಾಗಿಯೇ ಕುಳಿತಿದ್ದರು. ಪೊಲೀಸರು ಬ್ಯಾಗ್ ತೆರೆಸಿದಾಗ ಅದರಲ್ಲಿ ಮಗುವಿನ ಶವ ಇತ್ತು. ‘ಇದು ತಮ್ಮ ಮಗನ ಶವವೇ’ ಎಂದು ಪೊಲೀಸರು ಕೇಳಿದಾಗಲೂ ಮಹಿಳೆ ಶಾಂತವಾಗಿಯೇ ‘ಹೌದು’ ಎಂದು ಉತ್ತರಿಸಿದರು’ ಎಂದು ಜಾನ್‌ ಪ್ರಯಾಣದ ವೇಳೆ ಕಂಡಿದ್ದನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವನ್ನು ಕೊಂದು, ಸೋಮವಾರ ರಾತ್ರಿ ಶವವನ್ನು ಬ್ಯಾಗ್‌ನಲ್ಲಿ ತುಂಬಿ ಕಾರಿನಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಸುಚನಾ ಅವರನ್ನು ಪೊಲೀಸರು ಬಂಧಿಸಿದ್ದರು. ಮಾಪುಸಾ ಪಟ್ಟಣದ ನ್ಯಾಯಾಲಯ ಆಕೆಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ತನಿಖೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.