ಖಾರ್ಟೂಮ್: ಸುಡಾನ್‌ನಲ್ಲಿ ಅಧಿಕಾರಕ್ಕಾಗಿ ಮಿಲಿಟರಿ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಆರನೇ ದಿನವಾದ ಗುರುವಾರವೂ ವಿರಾಮ ಬಿದ್ದಿಲ್ಲ.
ಖಾರ್ಟೂಮ್‌ನಲ್ಲಿ ಬಾಂಬ್, ಗುಂಡಿನ ದಾಳಿ ಮುಂದುವರಿದಿದೆ. ಭಯಗೊಂಡಿರುವ ನಾಗರಿಕರು ಅಗತ್ಯ ಸಾಮಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ರಾಜಧಾನಿ ತೊರೆದು ಸುರಕ್ಷಿತ ಸ್ಥಳಗಳತ್ತ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 330ಕ್ಕೆ ಏರಿದ್ದು, 3,200 ಜನರು ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಶೇ 70ರಷ್ಟು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಂಡಿದೆ. ಇದರಿಂದ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರ ಸಂಘ ತಿಳಿಸಿದೆ.
ರಂಜಾನ್ ಉಪವಾಸ ಮುಕ್ತಾಯಗೊಳ್ಳುತ್ತಿದ್ದು ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಹಬ್ಬದ ಸಡಗರಕ್ಕೆ ಸಜ್ಜಾಗುತ್ತಿದ್ದಾರೆ. ಆದರೆ, ಸೇನಾ ಮುಖ್ಯಸ್ಥ ಜನರಲ್ ಅಬ್ದೆಲ್ ಫತ್ತಾಹ್ ಅಲ್ ಬುಹ್ರಾನ್ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊ ಕದನ ವಿರಾಮ ಘೋಷಿಸುವ ಯಾವುದೇ ಸುಳಿವು ನೀಡಿಲ್ಲ.
‘ಶುಕ್ರವಾರದಿಂದ ಈದ್ ಸಂಭ್ರಮ ಶುರುವಾಗಲಿದೆ. ಸಂಘರ್ಷ ಕೊನೆಯಾಗುವುದನ್ನು ಎದುರು ನೋಡುತ್ತಿದ್ದೇವೆ. ಆದರೆ, ಸದ್ಯದ ಸ್ಥಿತಿಯಲ್ಲಿ ಈ ನಿರೀಕ್ಷೆ ಕಷ್ಟಕರ’ ಎಂದು ಖಾರ್ಟೂಮ್ ನಿವಾಸಿ ಅಬ್ದುಲ್ಲಾ ಅಳಲು ತೋಡಿಕೊಂಡರು.
‘ವೈಮಾನಿಕ ದಾಳಿಯ ಸದ್ದಿನಿಂದ ಮುಂಜಾನೆ 4.30ಗಂಟೆಗೆ ಎಚ್ಚರಗೊಂಡೆವು. ಗುಂಡುಗಳು ಮನೆಯೊಳಗೆ ನುಸುಳದಂತೆ ಮನೆಯ ಬಾಗಿಲು, ಕಿಟಕಿಗಳನ್ನು ಭದ್ರಪಡಿಸಿಕೊಂಡೆವು. ಆದರೆ, ಮನೆಯ ಗೋಡೆಗಳಿಗೆ ಹಾನಿಗೊಳಿಸಿರುವ ಸಾಧ್ಯತೆಯಿದೆ’ ಎಂದು ರಾಜಧಾನಿಯ ದಕ್ಷಿಣ ಭಾಗದ ನಿವಾಸಿಯೊಬ್ಬರು ತಿಳಿಸಿದ್ದಾರೆ.
ರಸ್ತೆಗಳಲ್ಲಿ ಅರೆಸೇನಾ ಪಡೆಯ ಯೋಧರನ್ನು ಹೊತ್ತ ವಾಹನಗಳು ಸಂಚರಿಸುತ್ತಿವೆ. ಅವರ ಕೈಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಬೀದಿಗಳಲ್ಲಿ ಹೆಣಗಳು ಬಿದ್ದಿವೆ. ಭಯದಿಂದ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಅರೆಸೇನಾ ಪಡೆಯು ಕದನ ವಿರಾಮ ಘೋಷಿಸಿತ್ತು. ಆದರೂ, ಗುಂಡಿನ ದಾಳಿ ನಿಂತಿಲ್ಲ. ವಿಮಾನ ನಿಲ್ದಾಣ ಮತ್ತು ಮಿಲಿಟರಿ ಪಡೆ ಕಚೇರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ದುಗುಂಡುಗಳ ಸಿಡಿತದಿಂದ ದಟ್ಟ ಹೊಗೆ ಆವರಿಸಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈಜಿಪ್ಟ್ ಸೈನಿಕರ ಸ್ಥಳಾಂತರ: ಸುಡಾನ್‌ನಲ್ಲಿ ಜಂಟಿ ಸಮರಾಭ್ಯಾಸದ ತರಬೇತಿಗೆ ನಿಯೋಜನೆಗೊಂಡಿದ್ದ ಈಜಿಫ್ಟ್‌ನ 177 ಸೈನಿಕರನ್ನು ಅರೆಸೇನಾ ಪಡೆಯು ಬುಧವಾರ ಸೆರೆ ಹಿಡಿದಿತ್ತು. ಅವರನ್ನು ಮೂರು ವಿಮಾನಗಳ ಮೂಲಕ ಸುರಕ್ಷಿತವಾಗಿ ಕೈರೊಗೆ ಸ್ಥಳಾಂತರಿಸಲಾಗಿದೆ ಎಂದು ಈಜಿಪ್ಟ್ ಸೇನೆ ಖಚಿತಪಡಿಸಿದೆ.
ವಾಯುಪಡೆಯ 27 ಸೈನಿಕರು ರೆಡ್‌ಕ್ರಾಸ್ ಸಂಸ್ಥೆ ಮತ್ತು ಈಜಿಪ್ಟ್ ರಾಯಭಾರ ಕಚೇರಿಯಲ್ಲಿ ಸುರಕ್ಷಿತವಾಗಿದ್ದು, ಅವರ ಸ್ಥಳಾಂತರಕ್ಕೂ ಸಿದ್ಧತೆ ನಡೆದಿದೆ ಎಂದು ತಿಳಿಸಿದೆ.
ಕದನ ವಿರಾಮ ಕಗ್ಗಂಟು
‘ಈದ್ ಹಿನ್ನೆಲೆಯಲ್ಲಿ ಕದನ ವಿರಾಮಕ್ಕೆ ಸಿದ್ಧನಿದ್ದೇನೆ. ಆದರೆ, ಸೇನಾ ಮುಖ್ಯಸ್ಥ ಅಬ್ದೆಲ್ ಜೊತೆಗೆ ನಾನು ಮಾತುಕತೆಗೆ ಸಿದ್ಧವಿಲ್ಲ. ಆತನೊಬ್ಬ ‘ಕ್ರಿಮಿನಲ್’ ಎಂದು ಅರೆಸೇನಾ ಪಡೆಯ ಮುಖ್ಯಸ್ಥ ಮೊಹಮ್ಮದ್ ಹಮದಾನ್ ದಾಗಲೊ ಹೇಳಿದ್ದಾರೆ’ ಎಂದು ಆಲ್ ಝಜೀರ ಟಿ.ವಿ ವರದಿ ಮಾಡಿದೆ.
‘ಹಲವು ಪ್ರದೇಶಗಳಲ್ಲಿ ಅರೆಸೇನೆಯ ಯೋಧರು ರಸ್ತೆ ಬಂದ್ ಮಾಡಿ ಜನರ ಸುಗಮ ಸಂಚಾರಕ್ಕೆ ತೊಂದರೆ ನೀಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಕದನ ವಿರಾಮ ಸಾಧ್ಯವಿಲ್ಲ’ ಎಂದು ಅಬ್ದೆಲ್ ಸ್ಪಷ್ಟಪಡಿಸಿದ್ದಾರೆ.
ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ
ನವದೆಹಲಿ(ಪಿಟಿಐ): ‘ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರುವ ಬಗ್ಗೆ ಸಿದ್ಧತೆ ನಡೆದಿದ್ದು, ಅಗತ್ಯ ವಿಮಾನಗಳನ್ನೂ ಸಜ್ಜುಗೊಳಿಸಲಾಗುತ್ತಿದೆ. ಕಾರ್ಯಾಚರಣೆಯು ಅಲ್ಲಿನ ಪರಿಸ್ಥಿತಿಯನ್ನು ಅವಲಂಬಿಸಿದೆ’ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಸುಡಾನ್ ಸ್ಥಿತಿಗತಿ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ನ್ಯೂಯಾರ್ಕ್‌ಗೆ ಭೇಟಿ ನೀಡಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೊತೆಗೆ ಚರ್ಚಿಸುವ ನಿರೀಕ್ಷೆಯಿದೆ. ಸುಡಾನ್‌ನ ಬೆಳವಣಿಗೆಗಳು ಮತ್ತು ಭಾರತೀಯರ ಸುರಕ್ಷತೆ ಬಗ್ಗೆ ನಿಗಾವಹಿಸಲಾಗಿದೆ ಎಂದು ವಿದೇಶಾಂಗ ವಕ್ತಾರ ಅರಿಂಧಮ್ ಬಗ್ಚಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.