ನವದೆಹಲಿ: ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಸುರಕ್ಷತೆ ಮತ್ತು ರಕ್ಷಣೆಗಾಗಿ ಪ್ರಾರ್ಥಿಸಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪುರಿ ಬೀಚ್‌ನಲ್ಲಿ ಮರಳು ಕಲಾಕೃತಿಯನ್ನು ರಚಿಸಿದ್ದಾರೆ.
‘ಕಾರ್ಮಿಕರು ಆದಷ್ಟು ಬೇಗ ಸುರಕ್ಷಿತವಾಗಿ ಹೊರಬರಲು ನಾವು ಜಗನ್ನಾಥನನ್ನು ಪ್ರಾರ್ಥಿಸುತ್ತಿದ್ದೇವೆ. ಸಿಕ್ಕಿಬಿದ್ದಿರುವ 41 ಕಾರ್ಮಿಕರಲ್ಲಿ 5 ಮಂದಿ ಒಡಿಶಾದವರಿದ್ದಾರೆ. ಎಲ್ಲ ಕಾರ್ಮಿಕರ ರಕ್ಷಣೆಗಾಗಿ ನಾವೆಲ್ಲರೂ ಒಗ್ಗೂಡಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದು ಸುದರ್ಶನ್ ಪಟ್ನಾಯಕ್ ತಿಳಿಸಿದ್ದಾರೆ.
ಈ ಕಲಾಕೃತಿಯನ್ನು ತಯಾರಿಸಲು 4 ಟನ್ ಮರಳನ್ನು ಬಳಸಲಾಗಿದೆ. ಇದಕ್ಕೆ ವಿದ್ಯಾರ್ಥಿಗಳು ಸಹ ಕೈಜೋಡಿಸಿದರು ಎಂದು ಪಟ್ನಾಯಕ್ ತಿಳಿಸಿದ್ದಾರೆ.
ಸುರಂಗದಲ್ಲಿ 41 ಮಂದಿ ಕಾರ್ಮಿಕರ ಸಿಲುಕಿಕೊಂಡಿದ್ದಾರೆ. ಅವರ ರಕ್ಷಣೆಗಾಗಿ 11 ದಿನದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿರುವ 41 ಮಂದಿ ಕಾರ್ಮಿಕರ ದೃಶ್ಯಗಳನ್ನು ಎಂಡೊಸ್ಕೋಪಿಕ್ ಕ್ಯಾಮೆರಾ ಸೆರೆ ಹಿಡಿದಿದೆ. ಈ ಕಾರ್ಮಿಕರು ಸುರಂಗದಲ್ಲಿ ಸಿಲುಕಿದ ನಂತರದಲ್ಲಿ ದೊರೆತಿರುವ ಮೊದಲ ದೃಶ್ಯಾವಳಿ ಇದು.
ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕಗೊಂಡಿರುವ ಅವರ ಹತ್ತಿರದ ಸಂಬಂಧಿಗಳಲ್ಲಿ ಇದು ಆಶಾಭಾವನೆ ಯನ್ನು ಮೂಡಿಸಿದೆ. ಕಾರ್ಮಿಕರ ರಕ್ಷಣೆಗೆ ಹಲವು ಆಯಾಮಗಳಿಂದ ನಡೆಯುತ್ತಿರುವ ಕಾರ್ಯಗಳು 10ನೆಯ ದಿನ ಪ್ರವೇಶಿಸಿವೆ. ಸುರಂಗದ ಒಳಕ್ಕೆ ಸೋಮವಾರ ತೂರಿಸಿರುವ ಆರು ಇಂಚು ವ್ಯಾಸದ ಪೈಪ್ ಮೂಲಕ ಈ ಕ್ಯಾಮೆರಾ ಕಳುಹಿಸಲಾಗಿತ್ತು.
ಹಳದಿ ಮತ್ತು ಬಿಳಿ ಬಣ್ಣದ ಹೆಲ್ಮೆಟ್ ಧರಿಸಿರುವ ಕಾರ್ಮಿಕರು, ಪೈಪ್ ಮೂಲಕ ಕಳುಹಿಸಿದ ಆಹಾರ ಸ್ವೀಕರಿಸುತ್ತಿರುವುದನ್ನು ಹಾಗೂ ಪರಸ್ಪರ ಮಾತಿನಲ್ಲಿ ತೊಡಗಿರುವುದನ್ನು ಕ್ಯಾಮೆರಾ ಸೆರೆ ಹಿಡಿದಿದೆ. ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗಳು ಈ ದೃಶ್ಯಾವಳಿಯನ್ನು ಬಿಡುಗಡೆ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.