ADVERTISEMENT

ರಾಜ್ಯಸಭೆಗೆ ಇನ್ಫೊಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ ನಾಮನಿರ್ದೇಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2024, 8:08 IST
Last Updated 8 ಮಾರ್ಚ್ 2024, 8:08 IST
   

ನವದೆಹಲಿ: ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟವಾಗಲು ವಾರವಷ್ಟೇ ಉಳಿದಿರುವಾಗ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಲೇಖಕಿ ಹಾಗೂ ಇನ್ಫೊಸಿಸ್‌ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಶುಕ್ರವಾರ ಮಧ್ಯಾಹ್ನ ಪೋಸ್ಟ್‌ ಮಾಡಿ, ‘ಸುಧಾಮೂರ್ತಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಶಿಕ್ಷಣ, ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾಮೂರ್ತಿ ಅವರ ಕೊಡುಗೆ ಅಪಾರ ಹಾಗೂ ಸ್ಫೂರ್ತಿದಾಯಕ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯಿಂದ ನಾರಿಶಕ್ತಿಗೆ ಬಲ ಬಂದಂತಾಗಿದೆ. ಇದು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಉದಾಹರಿಸುತ್ತದೆ’ ಎಂದು ಬರೆದಿದ್ದಾರೆ. 

73 ವರ್ಷದ ಸುಧಾಮೂರ್ತಿ ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿಯವರು. ಅವರು ಇನ್ಪೊಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರ ಪತ್ನಿ. ಸುಧಾಮೂರ್ತಿ ಅವರ ಮಗಳನ್ನು ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ ವಿವಾಹವಾಗಿದ್ದಾರೆ. ಸುಧಾಮೂರ್ತಿ ಅವರು 40ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಸಮಾಜ ಸೇವೆಗಾಗಿ ಅವರಿಗೆ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. 2006ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು.

ADVERTISEMENT

ಪ್ರಸ್ತುತ ರಾಜ್ಯಸಭೆಯಲ್ಲಿರುವ ಕರ್ನಾಟಕದ ಎರಡನೇ ನಾಮನಿರ್ದೇಶಿತ ಸದಸ್ಯರಾಗಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು 2022ರ ಜುಲೈ ತಿಂಗಳಲ್ಲಿ ನಾಮನಿರ್ದೇಶನ ಮಾಡಲಾಗಿತ್ತು. 

ವಿವಿಧ ಕ್ಷೇತ್ರಗಳ ಸಾಧಕರ ನೆಲೆಯಲ್ಲಿ ರಾಜ್ಯಸಭೆಗೆ 12 ಮಂದಿಯ ನಾಮನಿರ್ದೇಶನ ಮಾಡಲು ಅವಕಾಶ ಇದೆ. ಸುಧಾಮೂರ್ತಿ ಅವರ ನೇಮಕದಿಂದಾಗಿ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಿದಂತಾಗಿದೆ. ನಾಮನಿರ್ದೇಶಿತ ಸದಸ್ಯರಾದ ರಾಕೇಶ್ ಸಿನ್ಹಾ, ಮಹೇಶ್‌ ಜೇಠ್ಮಲಾನಿ, ಗುಲಾಮ್‌ ರಾಮ್‌ ಶಕಲ್‌ ಹಾಗೂ ಸೋನಾಲ್‌ ಮಾನ್‌ಸಿಂಗ್ ಅವರು ಜುಲೈ 13ರಂದು ನಿವೃತ್ತರಾಗಲಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ರಂಜನ್‌ ಗೊಗೊಯ್‌, ಇಳಯರಾಜ, ವಿ.ವಿಜಯೇಂದ್ರ ಪ್ರಸಾದ್, ಸತ್ನಮ್ ಸಿಂಗ್‌ ಹಾಗೂ ಪಿ.ಟಿ. ಉಷಾ ಅವರು ಇತರ ನಾಮನಿರ್ದೇಶಿತ ಸದಸ್ಯರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.