ನವದೆಹಲಿ: ಬಾಲಕಿಯರ ಭವಿಷ್ಯಕ್ಕಾಗಿ ಸಣ್ಣ ಉಳಿತಾಯ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಆರಂಭಿಸಿರುವ ‘ಸುಕನ್ಯಾ ಸಮೃದ್ಧಿ ಯೋಜನೆ’ ಶರಿಯಾ ಪ್ರಕಾರ ಕಾನೂನುಬಾಹಿರ ಎಂದು ಕೆಲವು ಮುಫ್ತಿಗಳು (ಇಸ್ಲಾಂ ನ್ಯಾಯ ಪಂಡಿತರು) ಪ್ರತಿಪಾದಿಸಿದ್ದಾರೆ.
‘ಉಳಿತಾಯ ಮಾಡುವ ಹಣಕ್ಕೆ ಬಡ್ಡಿ ಸಿಗುವುದರಿಂದ ಇಸ್ಲಾಮಿನ ಶರಿಯಾ ಪ್ರಕಾರ ಈ ಯೋಜನೆ ಕಾನೂನುಬಾಹಿರ’ ಎಂದು ಜಮಿಯಾತ್ ಉಲಮಾ–ಐ–ಹಿಂದ್‌ನ ವಕ್ತಾರ ಅಝೀಮುಲ್ಲಾ ಸಿದ್ದಿಕಿ ಹೇಳಿದ್ದಾರೆ.
‘ಕೆಲವು ದಿನಗಳ ಹಿಂದೆ ಆಯೋಜಿಸಿದ್ದ ಸಂಘಟನೆಯ ಮೂರು ದಿನಗಳ ಸಮಾವೇಶದಲ್ಲಿ ಈ ಸಂಬಂಧ ಗೊತ್ತುವಳಿಯೊಂದನ್ನು ಸಹ ಅಂಗೀಕರಿಸಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಹಣ ವರ್ಗಾವಣೆಗಾಗಿ ಮೊಬೈಲ್‌ನಲ್ಲಿ ವಿವಿಧ ಆ್ಯಪ್‌ಗಳನ್ನು ಬಳಸುವುದು. ಕ್ಯಾಶ್‌ಬ್ಯಾಕ್ ಅಥವಾ ಬಹುಮಾನರೂಪದ ಪಾಯಿಂಟ್ ನೀಡುವ ಕೊಡುಗೆಗಳು, ಆ್ಯಪ್ ಆಧಾರಿತ ಕ್ಯಾಬ್ ಬುಕ್ ಮಾಡುವುದು ಶರಿಯಾ ಪ್ರಕಾರ ಕಾನೂನುಬದ್ಧ ಎಂಬ ಗೊತ್ತುವಳಿಯನ್ನು ಸಹ ಸ್ವೀಕರಿಸಲಾಗಿದೆ’ ಎಂದು ಸಿದ್ದಿಕಿ ಹೇಳಿದ್ದಾರೆ.
‘ಕಾನೂನುರೀತ್ಯ ಮಾರಾಟ ಮಾಡಲಾಗುವ ಸರಕುಗಳ ಕುರಿತು ಜಾಹೀರಾತು ನೀಡಲು ‘ಗೂಗಲ್‌ಆ್ಯಡ್‌ಸೆನ್ಸ್’ ತಂತ್ರಾಂಶ ಬಳಸುವುದಕ್ಕೆ ಅನುಮತಿ ಇದೆ. ಆದರೆ, ಈ ತಂತ್ರಾಂಶ ಬಳಸಿ ಸಿನಿಮಾ ಹಾಗೂ ಕಾನೂನುಬಾಹಿರ ಕಾರ್ಯಕ್ರಮಗಳ ಪ್ರಸಾರ ಮತ್ತು ಪ್ರಚಾರಕ್ಕೆ ಇಸ್ಲಾಮಿಕ್ ಶರಿಯಾದಲ್ಲಿ ಅವಕಾಶ ಇಲ್ಲ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.