ADVERTISEMENT

ಸುಖೋಯ್–ಮಿರಾಜ್ ವಿಮಾನಗಳ ಅಪಘಾತ: ಭಾರಿ ಸದ್ದು– ಪ್ರತ್ಯಕ್ಷದರ್ಶಿ ಹೇಳಿದ್ದೇನು?

ಪಿಟಿಐ
Published 29 ಜನವರಿ 2023, 1:54 IST
Last Updated 29 ಜನವರಿ 2023, 1:54 IST
   

ಮೊರೆನಾ: ಮಧ್ಯಪ್ರದೇಶದ ಮೊರೆನಾದಲ್ಲಿ ಸುಖೋಯ್–ಮಿರಾಜ್ ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಒಬ್ಬ ಪೈಲಟ್ ಮೃತಪಟ್ಟಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನವುಳ್ಳ ಶರವೇಗದ ಈ ವಿಮಾನಗಳ ನಡುವಿನ ಘರ್ಷಣೆ ಎಷ್ಟು ಭಯಾನಕವಾಗಿತ್ತು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡಿದ್ದಾರೆ. ಕಿವಿ ಕಿವುಡಾಗುವಷ್ಟು ದೊಡ್ಡ ಸದ್ದು, ನೆಲಕ್ಕುರುಳಿದ ಬೆಂಕಿ ಉಂಡೆಗಳು, ಪ್ಯಾರಾಚೂಟ್‌ ಮೂಲಕ ಆಗಸದಿಂದ ಜಿಗಿದ ಇಬ್ಬರು ಸಮವಸ್ತ್ರಧಾರಿ ಸಿಬ್ಬಂದಿ.. ಹೀಗೆ ಆ ಘರ್ಷಣೆಯ ನಂತರದ ಸನ್ನಿವೇಶವನ್ನು ಅವರು ವಿವರಿಸಿದ್ದಾರೆ.

ಬೆಳಿಗ್ಗೆ ದೈನಂದಿನ ತರಬೇತಿ ವೇಳೆ ಸುಖೋಯ್ ಎಂಕೆಐ ಮತ್ತು ಮಿರಾಜ್–2000 ವಿಮಾನಗಳು ಪರಸ್ಪರ ಅಪ್ಪಳಿಸಿವೆ. ಸುಖೋಯ್ ವಿಮಾನದ ಇಬ್ಬರೂ ಪೈಲಟ್‌ಗಳು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಮಿರಾಜ್ ವಿಮಾನದ ಪೈಲಟ್‌ಗೆ ಮಾರಣಾಂತಿಕ ಗಾಯಗಳಾಗಿವೆ. ಎರಡೂ ವಿಮಾನಗಳ ಅವಶೇಷಗಳು ಇಂದೋರ್‌ನಿಂದ 75 ಕಿ.ಮೀ ದೂರದ ಇಲ್ಲಿನ ಪಹರ್‌ಘರ್‌ನಲ್ಲಿ ಬಿದ್ದಿವೆ. ಕೆಲ ಬಿಡಿಭಾಗಗಳು ಭರತ್‌ಪುರದಲ್ಲೂ ಬಿದ್ದಿವೆ.

ADVERTISEMENT

ಎರಡು ವಿಮಾನಗಳ ಅವಶೇಷಗಳು ಪಹರ್‌ಘರ್‌ನಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ 500-800 ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದ್ದು, ಬೆಂಕಿ ಹೊತ್ತಿಕೊಂಡಿತ್ತು ಎಂದು ಪ್ರತ್ಯಕ್ಷದರ್ಶಿ ಹೇಳಿದರು.

ಸುತ್ತಮುತ್ತಲಿನ ಜನರು ಮಣ್ಣನ್ನು ಎರಚಿ ಎರಡು ವಿಮಾನಗಳನ್ನು ಆವರಿಸಿದ್ದ ಅಗ್ನಿಜ್ವಾಲೆಯನ್ನು ನಂದಿಸಲು ಪ್ರಯತ್ನಿಸಿದರು ಎಂದು ಅವರು ತಿಳಿಸಿದ್ದಾರೆ.

‘ವಿಮಾನಗಳ ಘರ್ಷಣೆಯಾದಾಗ ಮೇಲಿನಿಂದ ಪ್ರಬಲವಾದ ಬಾಂಬ್ ಸ್ಫೋಟದಂತಹ ಭಾರೀ ಶಬ್ದ ಕೇಳಿಸಿತು. ಮೇಲೆ ನೋಡಿದಾಗ ಬೆಂಕಿಯ ಉಂಡೆಗಳು ಕೆಳಗೆ ಬಿಳುತ್ತಿದ್ದವು. ಅವುಗಳಲ್ಲಿ ಕೆಲವು ಅರಣ್ಯಕ್ಕೆ ಬಿದ್ದರೆ ಮತ್ತೆ ಕೆಲವು ಇನ್ನೊಂದು ಬದಿಯ ಭರತ್‌ಪುರದಲ್ಲಿ ಬಿದ್ದವು’ಎಂದು ಪಹಾರ್‌ಘರ್ ಸರಪಂಚ್ ಶೈಲೇಂದ್ರ ಶಾಕ್ಯಾ ಮಾಧ್ಯಮಗಳಿಗೆ ತಿಳಿಸಿದರು.

‘ಎರಡು ಪ್ಯಾರಾಚೂಟ್‌ಗಳು ಕೆಳಗೆ ಬರುವುದನ್ನು ನೋಡಿದೆವು, ಅವು ಬರುವವರೆಗೂ ಕಾದೆವು. ಅವರೆಡು ಲ್ಯಾಂಡ್ ಆಗಲು 15-20 ನಿಮಿಷಗಳ ಕಾಲ ಆಯಿತು. ಆದರೆ, ಎರಡೂ ಪ್ಯಾರಾಚೂಟ್‌ಗಳು ಪೊದೆಗೆ ಬಿದ್ದು ಪೈಲಟ್‌ಗಳಿಗೆ ಗಾಯಗಳಾಗಿವೆ. ಸಮವಸ್ತ್ರದಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಹೊರೆಗೆಳೆದು ಪ್ರಾಥಮಿಕ ಚಿಕಿತ್ಸೆ ನೀಡಿದೆವು. ಬಳಿಕ, ಐಎಎಫ್ ಹೆಲಿಕಾಪ್ಟರ್ ಆಗಮಿಸಿ ಅವರನ್ನು ಗ್ವಾಲಿಯರ್‌ಗೆ ಕರೆದೊಯ್ಯಿತು’ ಎಂದು ಶಕ್ಯಾ ಮಾಹಿತಿ ನೀಡಿದರು.

ಅವಶೇಷಗಳ ಬಳಿ, ಕೈಗಳು ಕತ್ತರಿಸಿರುವ ಒಂದು ದೇಹವು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.