ನವದೆಹಲಿ: ಸಾಮಾಜಿಕ ಸೇವಾ ಸಂಸ್ಥೆ ‘ಸುಲಭ್ ಇಂಟರ್‌ನ್ಯಾಷನಲ್’ನ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ (80) ಅವರು ಹೃದಯ ಸ್ತಂಭನದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಪಾಠಕ್ ಅವರು ಕುಸಿದು ಬಿದ್ದರು. ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.
ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ಪಾಠಕ್ ಅವರು ಮೃತಪಟ್ಟಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನೈರ್ಮಲ್ಯ ಕ್ಷೇತ್ರದಲ್ಲಿನ ಕೆಲಸಕ್ಕಾಗಿ ಬಿಂದೇಶ್ವರ್ ಪಾಠಕ್ ಹೆಸರುವಾಸಿಯಾಗಿದ್ದರು. 1970ರಲ್ಲಿ ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯನ್ನು ಸ್ಥಾಪಿಸಿದರು. ವಿಶೇಷ ತಂತ್ರಜ್ಞಾನ ಬಳಸಿ ಕೇವಲ ಎರಡು ಅಡಿ ಜಾಗದಲ್ಲಿ ಶೌಚಾಲಯ ನಿರ್ಮಾಣ ಮಾಡುವ ಯೋಜನೆಯನ್ನು ಬಳಕೆಗೆ ತಂದರು. ಇದಕ್ಕಾಗಿ ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದರು.
ಈ ಸಂಸ್ಥೆಯ ಮೂಲಕ ಅಗ್ಗದ ದರದಲ್ಲಿ ಹಾಗೂ ಕಡಿಮೆ ಸ್ಥಳಾವಕಾಶದಲ್ಲಿ 54 ಲಕ್ಷಕ್ಕೂ ಹೆಚ್ಚು ಸರ್ಕಾರಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಸುಮಾರು 13 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ.
ಸುಲಭ್ ಇಂಟರ್‌ನ್ಯಾಷನಲ್ ಸಂಸ್ಥೆಯು ಮಾನವ ಹಕ್ಕುಗಳು, ಪರಿಸರ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ ಮತ್ತು ಶಿಕ್ಷಣದ ಮೂಲಕ ಸಾಮಾಜ ಸುಧಾರಣೆಯಂಥ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿದೆ.
ಬಿಂದೇಶ್ವರ್ ಪಾಠಕ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.