ಮುಂಬೈ: ‘ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗಾರ್ಕರ್ ಅವರನ್ನು ಶಿವಸೇನೆಯು ಪಕ್ಷದ ಹುದ್ದೆಯಿಂದ ‘ಹೊರಗಿಟ್ಟಿರುವುದು’ ಚುನಾವಣೆಯ ಕಾರಣಕ್ಕಾಗಿ ಮಾತ್ರ’ ಎಂದು ಎನ್‌ಸಿಪಿ (ಶರದ್ ಬಣ) ಸಂಸದೆ ಸುಪ್ರಿಯಾ ಸುಳೆ ಸೋಮವಾರ ಅಭಿಪ್ರಾಯಪಟ್ಟರು.
‘ಗೌರಿ ಲಂಕೇಶ್ ಅವರ ಹತ್ಯೆ ಆರೋಪಿಯನ್ನು ಪಕ್ಷಕ್ಕೆ ಸೇರಿಸಿಕೊಂಡು, ಈಗ ಹುದ್ದೆಯಿಂದ ದೂರ ಇಟ್ಟಿದ್ದಾರೆ. ಇಷ್ಟು ಮಾಡಿದರೆ ಸಾಕಾಗದು. ರಾಜ್ಯದಲ್ಲಿ ಚುನಾವಣೆ ಇದೆ ಎನ್ನುವ ಕಾರಣಕ್ಕಾಗಿ ಇಂಥ ನೈತಿಕತೆಯ ಮುಸುಕು ಹಾಕಿಕೊಳ್ಳಲಾಗುತ್ತಿದೆಯಷ್ಟೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಇಂಥ ಅಪರಾಧಿಗಳನ್ನು ಮತ್ತೊಮ್ಮೆ ಹತ್ತಿರ ಸೇರಿಸಿಕೊಳ್ಳಲಾಗುತ್ತದೆ’ ಎಂದು ಸುಳೆ ಅವರು ತಮ್ಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶ್ರೀಕಾಂತ್ ಅವರು ಶಿವಸೇನಾ (ಶಿಂದೆ ಬಣ) ಸೇರಿಕೊಂಡಿದ್ದು, ಅವರನ್ನು ಜಲ್ನಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದ್ದು ರಾಜ್ಯದಾದ್ಯಂತ ಟೀಕೆಗೆ ಗುರಿಯಾಗಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಏಕನಾಥ ಶಿಂದೆ, ಶ್ರೀಕಾಂತ್ ಅವರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸುವಂತೆ ಆದೇಶ ನೀಡಿದ್ದರು.
ಪತ್ರಕರ್ತ ಕಪಿಲ್ ಪಾಟೀಲ್ ಕಾಂಗ್ರೆಸ್‌ಗೆ:
ಪತ್ರಕರ್ತ, ಸಮಾಜವಾದಿ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಕಪಿಲ್ ಪಾಟೀಲ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.ಪಾಟೀಲ್ ಅವರು ಈ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದಲ್ಲಿ ಗುರುತಿಸಿಕೊಂಡಿದ್ದರು.
ಕಮಲ್ ಫಾರೂಕಿ ಮತ್ತೆ ಕಾಂಗ್ರೆಸ್‌ಗೆ: ಸುಮಾರು 20 ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಕಮಲ್ ಫಾರೂಕಿ ಅವರು ಮತ್ತೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಎನ್‌ಸಿಪಿ ಪಕ್ಷದ ಮಾಜಿ ವಕ್ತಾರ, ವಕೀಲ, ಫಾರೂಕಿ ಅವರ ಮಗ ಉಮರ್ ಕಮಲ್ ಫಾರೂಕಿ ಕೂಡ ಕಾಂಗ್ರೆಸ್ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.