ನವದೆಹಲಿ: ಪತ್ನಿ ಸುನಂದಾ ಪುಷ್ಕರ್ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲು ದೆಹಲಿ ಪೊಲೀಸರು ಶನಿವಾರ ನ್ಯಾಯಾಲಯವನ್ನು ಕೋರಿದ್ದಾರೆ.
ತರೂರ್ ಅವರ ಮೇಲೆ ಭಾರತೀಯ ದಂಡ ಸಂಹಿತೆ 498-ಎ (ಪತಿ ಅಥವಾ ಅವನ ಸಂಬಂಧಿಯಿಂದ ಮಹಿಳೆಯ ಮೇಲಿನ ಕ್ರೌರ್ಯ), 306 (ಆತ್ಮಹತ್ಯೆ) ಅಥವಾ 302ರ (ಕೊಲೆ) ಆರೋಪಗಳಿವೆ ಎಂದು ಸರ್ಕಾರಿ ಪರ ವಕೀಲ ಅತುಲ್ ಶ್ರೀವಾಸ್ತವ ನ್ಯಾಯಾಲಯಕ್ಕೆ ತಿಳಿಸಿದರು.
ಪುಷ್ಕರ್ ಅವರು ಸಾವಿಗೂ ಮುನ್ನ ಐಪಿಎಲ್ ಕುರಿತು ಸುದ್ದಿಗೋಷ್ಠಿ ನಡೆಸಲು ಉದ್ದೇಶಿಸಿದ್ದರು. ವರ್ಷದಿಂದ ದಂಪತಿ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು ಎಂದು ಸಾಕ್ಷಿಯೊಬ್ಬರ ಹೇಳಿಕೆಯನ್ನು ವಕೀಲರು ಉಲ್ಲೇಖಿಸಿದರು. ಪುಷ್ಕರ್ ಅವರು ವೈವಾಹಿಕ ಜೀವನದಲ್ಲಿ ದ್ರೋಹಕ್ಕೆ ಒಳಗಾಗಿದ್ದರು ಎಂದು ಅವರು ಪ್ರತಿಪಾದಿಸಿದರು.
ಮರಣೋತ್ತರ ವರದಿಯ ಪ್ರಕಾರ, ವಿಷದಿಂದ ಪುಷ್ಕರ್ ಸಾವು ಸಂಭವಿಸಿದೆ. ಅವರ ದೇಹದ ವಿವಿಧ ಭಾಗಗಳಲ್ಲಿ 15 ಗಾಯದ ಗುರುತುಗಳು ಕಂಡುಬಂದಿವೆ ಎಂದು ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಮಾಹಿತಿ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.