ADVERTISEMENT

ಶಶಿ ತರೂರ್‌ ದೂರು: ಅರ್ನಬ್‌ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್‌ ಆದೇಶ

ಏಜೆನ್ಸೀಸ್
Published 10 ಫೆಬ್ರುವರಿ 2019, 16:15 IST
Last Updated 10 ಫೆಬ್ರುವರಿ 2019, 16:15 IST
   

ರಿಪಬ್ಲಿಕ್‌ ಟಿವಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿರುವುದಾಗಿ ಬಾರ್‌ ಆ್ಯಂಡ್‌ ಬೆಂಚ್‌ ಶನಿವಾರ ವರದಿ ಮಾಡಿದೆ.

ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಅರ್ನಬ್‌ ವಿರುದ್ಧ ದೂರು ದಾಖಲಿಸಿದ್ದರು. ಅವರ ದೂರಿನ ಪ್ರಕಾರ, ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ಸಂಬಂಧಿಸಿದ ತನಿಖಾ ವರದಿಗಳು ಹಾಗೂ ಪೊಲೀಸರ ಆಂತರಿಕ ಟಿಪ್ಪಣಿಗಳನ್ನು ಒಳಗೊಂಡ ರಹಸ್ಯ ದಾಖಲೆಗಳನ್ನು ಅರ್ನಬ್‌ ಬಳಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ತನಿಖೆ ನಡೆಯುತ್ತಿರುವ ಪ್ರಕರಣದ ತನಿಖಾ ಮಾಹಿತಿಯನ್ನು ಸಾರ್ವಜನಿಕರಿಗೆ ಅಥವಾ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಅವಕಾಶವಿಲ್ಲ ಎಂದು ಶಶಿ ತರೂರ್‌ ಪ್ರಸ್ತಾಪಿಸಿದ್ದಾರೆ.

ಅರ್ನಬ್‌ ನೇತೃತ್ವದ ಸುದ್ದಿ ವಾಹಿನಿ ’ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ’ಉದ್ದೇಶ ಪೂರ್ವಕವಾಗಿಯೇ ಮಾನಹಾನಿಯಾಗುವಂತಹ ಸುದ್ದಿ ಪ್ರಕಟಿದೆ ಎಂದು ಶಶಿ ತರೂರ್ ದೂರಿನಲ್ಲಿ ಹೇಳಿದ್ದಾರೆ. ಅವರ ಗಮನಕ್ಕೆ ಬಾರದಂತೆ ಇಮೇಲ್‌ಗಳನ್ನು ಚಾನೆಲ್‌ ತಡಕಾಡಿದೆ ಎಂದೂ ಆರೋಪಿಸಿದ್ದಾರೆ.

ADVERTISEMENT

ದೆಹಲಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಧರ್ಮೇಂದರ್‌ ಸಿಂಗ್‌, ಪ್ರಕರಣದ ಸಂಬಂಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳುವಂತೆ ಜ.21ರಂದು ಸಂಬಂಧಿತ ಪೊಲೀಸ್‌ ಠಾಣೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ತನಿಖೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳು ಹೊರ ಬಂದಿದ್ದರ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದ್ದು, ಏಪ್ರಿಲ್‌ 4ರಂದು ಮುಂದಿನ ವಿಚಾರಣೆ ನಿಗದಿ ಪಡಿಸಿದೆ.

ಅರ್ನಬ್‌ ವಿರುದ್ಧ ಶಶಿ ತರೂರ್‌ ಹೂಡಿದ್ದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಕಲಾಪಗಳಿಗೆ ಕೇರಳ ಹೈಕೋರ್ಟ್‌ ಕಳೆದ ತಿಂಗಳು ತಡೆ ನೀಡಿತ್ತು.

2014ರ ಜನವರಿಯಲ್ಲಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ನವದೆಹಲಿಯ ಹೋಟೆಲ್‌ವೊಂದರಲ್ಲಿ ಮೃತಪಟ್ಟಿದ್ದರು. ಪ್ರೇರೇಪಿತ ಆತ್ಮಹತ್ಯೆ ಎಂಬ ಆರೋಪದ ಮೇಲೆ ತರೂರ್‌ ವಿರುದ್ಧ ಪೊಲೀಸರು ಆರೋಪ ಮಾಡಿದ್ದರು. ತನ್ನ ಮೇಲಿನ ಆರೋಪಗಳು ಅಸಂಬದ್ಧ ಹಾಗೂ ಆಧಾರ ರಹಿತ ಎಂದು ತರೂರ್‌ ಪ್ರತಿಕ್ರಿಯಿಸಿದ್ದರು. ಈ ಪ್ರಕರಣವನ್ನು ದೆಹಲಿ ಕೋರ್ಟ್‌ ಫೆ.4ರಂದು ಸೆಷನ್ಸ್‌ ಕೋರ್ಟ್‌ಗೆ ವರ್ಗಾಯಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.