ADVERTISEMENT

₹ 25 ಸಾವಿರ ಕೋಟಿ ಹಗರಣ: 'ಮಹಾ' ಡಿಸಿಎಂ ಅಜಿತ್ ಪವಾರ್ ಪತ್ನಿ ಸುನೇತ್ರಾ ದೋಷಮುಕ್ತ

ಪಿಟಿಐ
Published 24 ಏಪ್ರಿಲ್ 2024, 15:14 IST
Last Updated 24 ಏಪ್ರಿಲ್ 2024, 15:14 IST
<div class="paragraphs"><p>ಅಜಿತ್ ಪವಾರ್‌,&nbsp;ಸುನೇತ್ರ ಪವಾರ್‌</p></div>

ಅಜಿತ್ ಪವಾರ್‌, ಸುನೇತ್ರ ಪವಾರ್‌

   

ಮುಂಬೈ: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ (ಎಂಎಸ್‌ಸಿಬಿ)ನಲ್ಲಿ ₹25 ಸಾವಿರ ಕೋಟಿ  ಮೊತ್ತದ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಪತ್ನಿ ಹಾಗೂ ಬಾರಾಮತಿ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಗಿರುವ ಸುನೇತ್ರಾ ಪವಾರ್‌ ಅವರನ್ನು ಮುಂಬೈ ಪೊಲೀಸರು ದೋಷಮುಕ್ತಗೊಳಿಸಿದ್ದಾರೆ.

ಈ ಹಗರಣ ಕುರಿತು ತನಿಖೆ ಕೈಗೊಂಡಿದ್ದ ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ವಿಭಾಗವು (ಇಒಡಬ್ಲ್ಯು), ಪ್ರಕರಣ ಮುಕ್ತಾಯಗೊಳಿಸಿ ಜನವರಿಯಲ್ಲಿ ವರದಿ ಸಲ್ಲಿಸಿದೆ. 

ADVERTISEMENT

‘ಅಜಿತ್‌ ಪವಾರ್‌ ಹಾಗೂ ಸುನೇತ್ರಾ ಪವಾರ್‌ ಅವರ ಜೊತೆ ನಂಟಿತ್ತು ಎಂದು ಆರೋಪಿಸಲಾದ ಹಣಕಾಸು ವ್ಯವಹಾರದಲ್ಲಿ ಯಾವುದೇ ಕ್ರಿಮಿನಲ್‌ ಅಪರಾಧ ನಡೆದಿಲ್ಲ’ ಎಂದು ಇಒಡಬ್ಲ್ಯು ತನ್ನ ವರದಿಯಲ್ಲಿ ತಿಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಸುನೇತ್ರಾ ಅವರು ಎನ್‌ಸಿಪಿ (ಶರದ್‌ ಪವಾರ್‌ ಬಣ) ಭದ್ರಕೋಟೆ ಎನಿಸಿರುವ ಬಾರಾಮತಿ ಕ್ಷೇತ್ರದಲ್ಲಿ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಎದುರಿಸುತ್ತಿದ್ದಾರೆ.

‘ಅಜಿತ್‌ ಪವಾರ್‌ ಅವರ ಜೊತೆ ನಂಟು ಹೊಂದಿರುವ ಜರಂಡೇಶ್ವರ ಸಕ್ಕರೆ ಕಾರ್ಖಾನೆಗೆ ಸಾಲ ಅಥವಾ ಮಾರಾಟ ಕುರಿತು ಮಂಜೂರಾತಿ ನೀಡಿದ ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕಿಗೆ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ’ ಎಂದು ಇಒಡಬ್ಲ್ಯು ತನ್ನ ವರದಿಯಲ್ಲಿ ಹೇಳಿದೆ.

‘ಸುನೇತ್ರ ಪವಾರ್‌ ಅವರು ಜೈ ಅಗ್ರೋಟೆಕ್‌ ಕಂಪನಿಯ ನಿರ್ದೇಶಕಿ ಸ್ಥಾನಕ್ಕೆ 2008ರಲ್ಲಿ ರಾಜೀನಾಮೆ ನೀಡಿದ್ದರು. ಎರಡು ವರ್ಷಗಳ ನಂತರ ಈ ಕಂಪನಿಯು ಜರಂಡೇಶ್ವರ ಸಕ್ಕರೆ ಕಾರ್ಖಾನೆಗೆ ₹20.25 ಕೋಟಿ ನೀಡಿತ್ತು. ಆ ವೇಳೆ ನಡೆದಿದ್ದ ಹರಾಜಿನಲ್ಲಿ, ಗುರು ಕಮಾಡಿಟಿ ಎಂಬ ಕಂಪನಿಯು ಈ ಸಕ್ಕರೆ ಕಾರ್ಖಾನೆಯನ್ನು ₹65.75 ಕೋಟಿಗೆ ಖರೀದಿಸಿತ್ತು. ನಂತರ, ಬೇರೊಂದು ಕಂಪನಿಗೆ ಈ ಕಾರ್ಖಾನೆಯನ್ನು ಲೀಸ್‌ಗೆ ನೀಡಲಾಯಿತು. ರಾಜೇಂದ್ರ ಘಾಡ್ಗೆ ಸೇರಿದಂತೆ ಅಜಿತ್‌ ಪವಾರ್ ಅವರ ಕೆಲ ಸಂಬಂಧಿಕರು ಈ ಕಂಪನಿಯ ನಿರ್ದೇಶಕರಾಗಿದ್ದರು’ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ಲೀಸ್‌ ಮೇಲೆ ಸಕ್ಕರೆ ಕಾರ್ಖಾನೆಯನ್ನು ಪಡೆದಿದ್ದ ಕಂಪನಿಯು ಗುರು ಕಮಾಡಿಟಿ ಸಂಸ್ಥೆಗೆ ಬಾಡಿಗೆಯಾಗಿ ₹65.53 ಕೋಟಿ ನೀಡಿತ್ತು. ಈ ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿದ್ದು ಕಂಡುಬಂದಿಲ್ಲ’ ಎಂದು ಇಒಡಬ್ಲ್ಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.