ನವದೆಹಲಿ: ಬುಧವಾರ ಸಂಜೆ ವಿಶಿಷ್ಟ ‘ಸೂಪರ್ ಬ್ಲೂ ಮೂನ್’ ವಿದ್ಯಮಾನವನ್ನು ಜನರು ಮತ್ತು ಖಗೋಳಶಾಸ್ತ್ರಜ್ಞರು ಕಣ್ತುಂಬಿಕೊಂಡಿದ್ದಾರೆ.. ದೇಶದಾದ್ಯಂತ ಈ ದೃಶ್ಯ ಗೋಚರಿಸಿದೆ.
ಸೂಪರ್ ಮೂನ್ ಮತ್ತು ಬ್ಲೂ ಮೂನ್ ಒಟ್ಟೊಟ್ಟಿಗೆ ಸಂಭವಿಸುವ ಮೂಲಕ ಬುಧವಾರ ಅಪರೂಪದ ಘಟನೆಗೆ ಆಗಸ ಸಾಕ್ಷಿಯಾಗಿದೆ. ಸೂಪರ್ ಬ್ಲೂ ಮೂನ್ ಸರಾಸರಿ 10 ವರ್ಷಗಳಿಗೊಮ್ಮೆ ಸಂಭವಿಸುತ್ತದೆ ಎಂದು ನಾಸಾ ತಿಳಿಸಿದೆ. ಮುಂದಿನ ಸೂಪರ್ ಬ್ಲೂ ಮೂನ್ ಜನವರಿ 2037ರವರೆಗೆ ಮತ್ತೆ ಸಂಭವಿಸುವುದಿಲ್ಲ ಎಂದು ಹೇಳಿದೆ.
ಚಂದ್ರನು ಭೂಮಿಗೆ ಹತ್ತಿರ ಬಂದಿದ್ದರಿಂದ ಎಂದಿಗಿಂತ ದೊಡ್ಡದಾಗಿ ಕಂಡಿದೆ. ಇದನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಹುಣ್ಣಿಮೆಯಂದೇ ಈ ವಿದ್ಯಮಾನ ಸಂಭವಿಸುತ್ತದೆ.. ಆಗಸ್ಟ್ ತಿಂಗಳಲ್ಲಿ ಸಂಭವಿಸಿದ 2ನೇ ಹುಣ್ಣಿಮೆ ಇದಾಗಿದೆ. ಆಗಸ್ಟ್ 1 ರಂದು ಮೊದಲ ಹುಣ್ಣಿಮೆ ಸಂಭವಿಸಿತ್ತು.
ಬ್ಲೂ ಮೂನ್ ಎಂದರೆ ಚಂದ್ರನು ನೀಲಿಯಾಗಿ ಕಾಣುವುದಲ್ಲ. ಒಂದೇ ತಿಂಗಳಲ್ಲಿ ಸಂಭವಿಸುವ ಎರಡನೇ ಹುಣ್ಣಿಮೆಯನ್ನು ನಾಸಾ ಈ ರೀತಿ ಕರೆದಿದೆ. ಬ್ಲೂಮೂನ್ ಸರಾಸರಿ ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
ವರದಿಯ ಪ್ರಕಾರ, ಬುಧವಾರ ರಾತ್ರಿ 9:30ರ ಸುಮಾರಿಗೆ ಬ್ಲೂ ಮೂನ್ ಪ್ರಕಾಶಮಾನವಾಗಿ ಗೋಚರಿಸಿದೆ. ಆಗಸ್ಟ್ 31ರ ಬೆಳಿಗ್ಗೆ 7:30ರ ಸುಮಾರಿಗೆ ಬ್ಲೂ ಸೂಪರ್ ಮೂನ್ ಅತ್ಯಂತ ಪ್ರಕಾಶಮಾನವಾಗಿ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.