ನವದೆಹಲಿ: ‘ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕಿಯು ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಬಹುದು’ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2022ರ ಜೂನ್ 13ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ‘ಬಚ್‌ಪನ್ ಬಚಾವೊ ಆಂದೋಲನ್’ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದೆ.
ಮದುವೆಗೆ ಸಮ್ಮತಿ ನೀಡುವ ವಯಸ್ಸು ಇಳಿಸುವುದು ಲೈಂಗಿಕ ದೌರ್ಜನ್ಯ ಪ್ರಕರಣಗಳ ದೊಡ್ಡ ಸಂಖ್ಯೆಯ ಸಂತ್ರಸ್ತ ಮಕ್ಕಳ, ಮುಖ್ಯವಾಗಿ ಬಾಲಕಿಯರ ಹಿತಾಸಕ್ತಿ ರಕ್ಷಣೆಯ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸಲಿದೆ ಎಂದು ಎನ್‌ಜಿಒ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠವು ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗಕ್ಕೆ (ಎನ್‌ಸಿಪಿಸಿಆರ್) ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶ ಪ್ರಶ್ನಿಸಿ ಎನ್‌ಸಿಪಿಸಿಆರ್ ಹಿಂದೆಯೇ ಅರ್ಜಿ ಸಲ್ಲಿಸಿತ್ತು. ಆಗ ವಕೀಲ ರಾಜಶೇಖರ್ ರಾವ್‌ರನ್ನು ಅಮಿಕಸ್ ಕ್ಯೂರಿ ಆಗಿ ನೇಮಿಸಿದ್ದ ‘ಸುಪ್ರೀಂ’, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಆದರೆ, ಪ್ರಕರಣದಲ್ಲಿ ಅನ್ವಯಿಸುವ ಕಾನೂನು ಪರಿಶೀಲಿಸಲಾಗುವುದು ಎಂದು ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.