ನವದೆಹಲಿ: ‘ಮದುವೆಗೆ ಹೊರತಾದ ಗರ್ಭಧಾರಣೆಯು ಮಾನಸಿಕ ಆಘಾತವನ್ನು ಉಂಟುಮಾಡುವಂಥದ್ದು’ ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅತ್ಯಾಚಾರ ಸಂತ್ರಸ್ತೆಯೊಬ್ಬರ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ಸೋಮವಾರ ಅನುಮತಿ ನೀಡಿದೆ. ಗರ್ಭಪಾತಕ್ಕೆ ಈ ಹಿಂದೆ ಅವಕಾಶ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಕಾರ್ಯವೈಖರಿಗೆ ಸುಪ್ರೀಂ ಕೋರ್ಟ್ ಇದೇ ವೇಳೆ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದೆ.
ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ವರದಿಯನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಬಿ. ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು, ಗರ್ಭಪಾತದ ಕೋರಿಕೆಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿರುವುದು ಸರಿಯಲ್ಲ ಎಂದು ಹೇಳಿತು.
‘ವಿವಾಹ ವ್ಯವಸ್ಥೆಯೊಳಗಿನ ಭಾರತೀಯ ಸಮಾಜದಲ್ಲಿ ಗರ್ಭಧಾರಣೆಯು ದಂಪತಿಗೆ ಮಾತ್ರವಲ್ಲದೆ ಕುಟುಂಬ, ಸ್ನೇಹಿತರಿಗೆ ಸಂತೋಷ ತರುವಂಥದ್ದು. ಆದರೆ, ವಿವಾಹಕ್ಕೆ ಹೊರತಾದ ಗರ್ಭಧಾರಣೆಯು ಅಪಾಯಕಾರಿ. ಲೈಂಗಿಕ ದೌರ್ಜನ್ಯದಂತಹ ಸಂದರ್ಭಗಳಲ್ಲಂತೂ ಆಘಾತಕ್ಕೆ ಕಾರಣವಾಗುತ್ತದೆ. ಮಹಿಳೆಯರ ಮೇಲಿನ ಲೈಂಗಿಕ ಆಕ್ರಮಣವೇ ದುಃಖಕರ. ಅದರಿಂದ ಆಗುವ ಗರ್ಭಧಾರಣೆಯು ಮತ್ತಷ್ಟು ನೋವಿಗೆ ಕಾರಣವಾಗುತ್ತದೆ‘ ಎಂದು ಕೋರ್ಟ್ ಹೇಳಿತು.
‘ಪ್ರಕರಣದ ಕುರಿತ ಚರ್ಚೆ ಮತ್ತು ವೈದ್ಯಕೀಯ ವರದಿಯನ್ನು ಗಮನದಲ್ಲಿಟ್ಟುಕೊಂಡು, ಸಂತ್ರಸ್ತೆಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡುತ್ತದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿ, ಗರ್ಭಪಾತದ ಕಾರ್ಯವಿಧಾನ ಕೈಗೊಳ್ಳ ಬಹುದು’ ಎಂದು ಪೀಠ ಹೇಳಿತು.
ಗರ್ಭಪಾತ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಸುಪ್ರೀಂ ಕೋರ್ಟ್ ತಾಕೀತು
‘ಗರ್ಭಪಾತದ ಬಳಿಕ ಭ್ರೂಣವು ಜೀವಂತವಾಗಿರುವುದು ಕಂಡುಬಂದರೆ, ಅದನ್ನು ಬದುಕಿಸಿಕೊಳ್ಳಲು ಎಲ್ಲ ಕ್ರಮಗಳನ್ನು ಆಸ್ಪತ್ರೆ ಕೈಗೊಳ್ಳಬೇಕು. ಮಗು ಉಳಿದರೆ ಅದರ ಕಾನೂನು ಬದ್ಧ ದತ್ತು ಪ್ರಕ್ರಿಯೆಯನ್ನು ಸರ್ಕಾರ ಕೈಗೊಳ್ಳಬಹುದು’ ಎಂದೂ ತಿಳಿಸಿತು.
ಗರ್ಭಪಾತಕ್ಕೆ ಅನುಮತಿ ಕೋರಿದ್ದ ಅತ್ಯಾಚಾರ ಸಂತ್ರಸ್ತೆಯ ಅರ್ಜಿಯ ವಿಚಾರಣೆಯಲ್ಲಿನ ಗುಜರಾತ್ ಹೈಕೋರ್ಟ್‌ನ ವಿಳಂಬ ಧೋರಣೆಯನ್ನೂ ಸುಪ್ರೀಂ ಕೋರ್ಟ್ ಆಕ್ಷೇಪಿಸಿದೆ. ವಿಚಾರಣೆ ತಡವಾಗಿದ್ದರಿಂದ ಅಮೂಲ್ಯ ಸಮಯ ಕಳೆದುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿತು.
ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯಿದೆಯಡಿಯಲ್ಲಿ ವಿವಾಹಿತ ಮಹಿಳೆಯರು ಮತ್ತು ಅತ್ಯಾಚಾರ ಸಂತ್ರಸ್ತೆಯರ, ಅಂಗವಿಕಲರು, ಅಪ್ರಾಪ್ತ ವಯಸ್ಕರು, ಇತರ ದುರ್ಬಲ ಮಹಿಳೆಯರು ಗರ್ಭಪಾತಕ್ಕೆ 24 ವಾರಗಳ ಮಿತಿಯನ್ನು ವಿಧಿಸಲಾಗಿದೆ.
ಆದೇಶಕ್ಕೆ ಬೆಲೆ ಇಲ್ಲವೇ?: ಗುಜರಾತ್ ಹೈಕೋರ್ಟ್‌ಗೆ ತೀವ್ರ ತರಾಟೆ
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಸಂಬಂಧಿಸಿದ ಅರ್ಜಿಯನ್ನು ಮುಂದೂಡಿದ್ದ ಗುಜರಾತ್ ಹೈಕೋರ್ಟ್ ವಿರುದ್ಧ ಮೂರು ದಿನಗಳ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಸೋಮವಾರವೂ ಇದೇ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಹೊರಡಿಸಿರುವ ಆದೇಶಕ್ಕೆ ಮತ್ತೆ ಗರಂ ಆಗಿದೆ.
ಸುಪ್ರೀಂ ಕೋರ್ಟ್‌ನ ಮುಂದೆ ಸಂತ್ರಸ್ತೆಯ ಅರ್ಜಿ ವಿಚಾರಣೆಗೆ ಬರುವ ಕೆಲವೇ ಗಂಟೆಗಳಿಗೂ ಮೊದಲೇ (ಆಗಸ್ಟ್ 19) ಸ್ವಯಂಪ್ರೇರಿತವಾಗಿ ಅರ್ಜಿ ಕೈಗೆತ್ತಿಕೊಂಡ ಹೈಕೋರ್ಟ್, ಸಂತ್ರಸ್ತೆಯು ಮಗುವಿಗೆ ಜನ್ಮ ನೀಡುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸೂಚಿಸಿತ್ತು.
ಈ ಬಗ್ಗೆ ಕೆಂಡಾಮಂಡಲವಾದ ವಿಭಾಗೀಯ ನ್ಯಾಯಪೀಠವು, ‘ಹೈಕೋರ್ಟ್‌ನ ಆದೇಶವು ಸಾಂವಿಧಾನಿಕ ತತ್ವಕ್ಕೆ ವಿರುದ್ಧವಾದುದು’ ಎಂದು ಪ್ರತಿಪಾದಿಸಿತು.
ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವಿರುದ್ಧವಾಗಿ ಹೈಕೋರ್ಟ್ ಆದೇಶ ಹೊರಡಿಸಿದೆ. ಗುಜರಾತ್ ಹೈಕೋರ್ಟ್‌ನಲ್ಲಿ ಏನು ನಡೆಯುತ್ತಿದೆ? ನಾವು ನೀಡುವ ಆದೇಶಕ್ಕೆ ವಿರುದ್ಧವಾಗಿ ನ್ಯಾಯಾಧೀಶರು ಆದೇಶ ಹೊರಡಿಸುತ್ತಾರೆಯೇ? ನಿಮ್ಮ ಇಂತಹ ವರ್ತನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ’ ಎಂದು ಕಿಡಿಕಾರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.