ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸಾಮಾಜಿಕ ಹೋರಾಟಗಾರ, ಕವಿ ಪಿ.ವರವರ ರಾವ್ (82) ಅವರು ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹೈದರಾಬಾದ್‌ಗೆ ಪ್ರಯಾಣಿಸಲು ಅನುಮತಿ ಕೋರಿ ಸಂಬಂಧಿತ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ರಾವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆನಂದ್ ಗ್ರೋವರ್, ರಾವ್ ಅವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದ್ದಾರೆ. ರಾವ್ ತೆಲಂಗಾಣದ ಹೈದರಾಬಾದ್ ನಿವಾಸಿಯಾದ ಕಾರಣ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸಿದ್ದಾರೆ ಎಂದು ತಿಳಿಸಿದರು.ಹೆಚ್ಚುವರಿ ಸಾಲಿಟರಿ ಜನರಲ್ ಎಸ್.ವಿ.ರಾಜು ಅವರು ಈ ಮನವಿಗೆ ವಿರೋಧ ವ್ಯಕ್ತಪಡಿಸಿದರು.
ಬಳಿಕ ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ಆರ್.ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಮೂವರು ಸದಸ್ಯರ ಪೀಠ ‘ಶಸ್ತ್ರಚಿಕಿತ್ಸೆಗೆ ಹೈದರಾಬಾದ್‌ಗೆ ತೆರಳಲು ಸಂಬಂಧಿತ ವಿಚಾರಣಾ ನ್ಯಾಯಾಲಯಕ್ಕೆಎರಡು ವಾರಗಳ ಒಳಗಾಗಿ ಮನವಿ ಸಲ್ಲಿಸಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ’ ಎಂದು ತೀರ್ಪು ಪ್ರಕಟಿಸಿತು.
ಪಿ.ವರವರರಾವ್ ಅವರಿಗೆ ವೈದ್ಯಕೀಯ ಕಾರಣಕ್ಕೆ ಸುಪ್ರೀಂ ಕೋರ್ಟ್ ಆಗಸ್ಟ್ 10ರಂದು ಜಾಮೀನು ಮಂಜೂರು ಮಾಡಿತ್ತು. ಗ್ರೇಟರ್ ಮುಂಬೈ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.