ನವದೆಹಲಿ: ಪೂಜಾ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದು, ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಅವಕಾಶ ನೀಡುವುದು ಮತ್ತು ಕೆಲವು ಸಂಪ್ರದಾಯಗಳ ಬದಲಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ ತಿಂಗಳಲ್ಲಿ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ 2018ರಲ್ಲಿ ನೀಡಿದ್ದ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಏಳು ಮಂದಿ ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಒಪ್ಪಿಸಲಾಗಿದೆ. ಈ ಅರ್ಜಿಯ ಜೊತೆಯಲ್ಲೇ ಇದೇ ಸ್ವರೂಪದ ಎಲ್ಲಾ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳುವ ನಿರೀಕ್ಷೆ ಇದೆ.
‘ಮರುಪರಿಶೀಲನಾ ಅರ್ಜಿಗಳು ಮತ್ತು ಸಂಬಂಧಿಸಿದ ಎಲ್ಲಾ ಪ್ರಕರಣಗಳು ಜನವರಿ ತಿಂಗಳಲ್ಲಿ ನ್ಯಾಯಾಧೀಶರ ಮುಂದೆ ಬರುವ ನಿರೀಕ್ಷೆ ಇದೆ’ ಎಂದು ಸಹಾಯಕ ರಿಜಿಸ್ಟ್ರಾರ್ ಅವರು ಶನಿವಾರ ಸೂಚನೆ ನೀಡಿದ್ದಾರೆ.
ಶಬರಿಮಲೆ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ನ.14ರಂದು ವಿಸ್ತೃತ ಪೀಠಕ್ಕೆ ಒಪ್ಪಿಸಿದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ‘ದರ್ಗಾ ಮತ್ತು ಮಸೀದಿಯೊಳಗೆ ಪ್ರವೇಶಿಸಲು ಮುಸ್ಲಿಂ ಮಹಿಳೆಯರಿಗೆ ಅನುಮತಿ ನೀಡುವುದು, ಬೇರೆ ಸಮುದಾಯದ ವ್ಯಕ್ತಿಯನ್ನು ವರಿಸಿದ ಪಾರ್ಸಿ ಮಹಿಳೆಗೆ ಪವಿತ್ರವಾದ ಅಗ್ನಿ ಇರುವ ‘ಅಗ್ಯಾರಿ’ ದೇವಸ್ಥಾನದೊಳಗೆ ಪ್ರವೇಶಕ್ಕೆ ಅನುಮತಿ ನೀಡುವುದು, ದಾವುದಿ ಬೊಹರಾ ಸಮುದಾಯದಲ್ಲಿ ಅಸ್ತಿತ್ವದಲ್ಲಿರುವ ಮಹಿಳೆಯರ ಜನನಾಂಗವನ್ನು ಕತ್ತರಿಸುವ ಸಂಪ್ರದಾಯಗಳ ಬಗ್ಗೆಯೂ ಸ್ಪಷ್ಟವಾದ ನಿರ್ಣಯಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.