ನವದೆಹಲಿ: ನ್ಯಾಯಮೂರ್ತಿಗಳಾದ ನೊಂಗ್‌ಮೀಕಾಪಂ ಕೋಟೀಶ್ವರ ಸಿಂಗ್ ಮತ್ತು ಆರ್.ಮಹದೇವನ್ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಇಂದು (ಗುರುವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಪೈಕಿ ನೊಂಗ್‌ಮೀಕಾಪಂ ಕೋಟೀಶ್ವರ ಸಿಂಗ್ ಅವರು ಮಣಿಪುರದವರಾಗಿದ್ದು, ಆ ರಾಜ್ಯದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೇರಿದ ಮೊದಲಿಗರಾಗಿದ್ದಾರೆ.
ಆ ಮೂಲಕ ಸುಪ್ರೀಂ ಕೋರ್ಟ್‌ನ 34 ನ್ಯಾಯಮೂರ್ತಿಗಳ ಸ್ಥಾನಗಳೂ ಭರ್ತಿಯಾದಂತಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಪ್ರಮಾಣ ವಚನ ಬೋಧಿಸಿದರು. ಕೋಟೀಶ್ವರ ಸಿಂಗ್ ಮತ್ತು ಆರ್.ಮಹದೇವನ್, ಕ್ರಮವಾಗಿ ಜಮ್ಮು–ಕಾಶ್ಮೀರ ಹಾಗೂ ಮದ್ರಾಸ್ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು.
ನವೆಂಬರ್‌ಗೆ ಎರಡು ಸ್ಥಾನ ತೆರವು:
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರು ಸೆಪ್ಟೆಂಬರ್ 1ರಂದು ನಿವೃತ್ತರಾಗಲಿದ್ದಾರೆ. ಹಾಗೆಯೇ ಸಿಜೆಐ ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ಇದರೊಂದಿಗೆ ನವೆಂಬರ್ ವೇಳೆಗೆ ಎರಡು ಸ್ಥಾನ ತೆರವಾಗಲಿದೆ.
2024ರ ಏಪ್ರಿಲ್ 10ರಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು 2024ರ ಮೇ 19ರಂದು ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರು ನಿವೃತ್ತರಾದ ಕಾರಣ ಖಾಲಿಯಾದ ಹುದ್ದೆಗಳಿಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಇತರ ನಾಲ್ವರು ನ್ಯಾಯಮೂರ್ತಿಗಳ ನೇತೃತ್ವದ ಕೊಲಿಜಿಯಂ ಜುಲೈ 11ರಂದು ಈ ಇಬ್ಬರ ಹೆಸರನ್ನು ಶಿಫಾರಸು ಮಾಡಿತ್ತು.
ನಂತರ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಈ ಇಬ್ಬರ ನೇಮಕಾತಿ ಕುರಿತು ಕಾನೂನು ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.