ADVERTISEMENT

ಮಹಿಳಾ ಸರಪಂಚ್‌ಗೆ ಕಿರುಕುಳ: ಚಂಡೀಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ, ದಂಡ

ಏಜೆನ್ಸೀಸ್
Published 14 ನವೆಂಬರ್ 2024, 10:53 IST
Last Updated 14 ನವೆಂಬರ್ 2024, 10:53 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ರಾಯಪುರ: ಮಹಿಳಾ ಸರಪಂಚ್‌ವೊಬ್ಬರಿಗೆ ಕಿರುಕುಳ ನೀಡಿ, ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಚಾಟಿ ಬೀಸಿದೆ. ಸಂತ್ರಸ್ತೆಗೆ ಪರಿಹಾರ ನೀಡುವಂತೆಯೂ ನಿರ್ದೇಶನ ನೀಡಿದೆ ಎಂದು Bar and Bench ವೆಬ್‌ಸೈಟ್‌ ವರದಿ ಮಾಡಿದೆ.

ನಿರ್ಮಾಣ ಕಾಮಗಾರಿ ವಿಳಂಬ ಆರೋಪದ ಮೇಲೆ ತಮ್ಮನ್ನು ಸರಪಂಚ್ ಸ್ಥಾನದಿಂದ ವಜಾ ಮಾಡಿರುವುದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಉಜ್ಜಲ್‌ ಭುಯಾನ್‌ ಅವರಿದ್ದ ಪೀಠ, ಅರ್ಜಿಯ ವಿಚಾರಣೆ ನಡೆಸಿದೆ.

ADVERTISEMENT

ನ್ಯಾಯಾಲಯದಲ್ಲಿ ಹಾಜರಿದ್ದ ಸರ್ಕಾರದ ಪ್ರತಿನಿಧಿಗೆ ಛೀಮಾರಿ ಹಾಕಿದ ನ್ಯಾ. ಸೂರ್ಯ ಕಾಂತ್‌, 'ಕೆಲವು ಗುಮಾಸ್ತರನ್ನು ನೀವು ಅಧಿಕಾರಿಗಳನ್ನಾಗಿ ಮಾಡಿದ್ದೀರಿ. ಸರಪಂಚರು ಅಂಥವರ ಮುಂದೆ ನಿಲ್ಲಬೇಕೆಂದು ಬಯಸುತ್ತಿದ್ದೀರಿ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

'ದೂರದ ಪ್ರದೇಶದಲ್ಲಿರುವ ತನ್ನ ಗ್ರಾಮದ ಸೇವೆ ಮಾಡುವ ಬಯಕೆ ಹೊಂದಿರುವ ಚುನಾಯಿತ ಮಹಿಳಾ ಸರಪಂಚ್‌ಗೆ, ಪ್ರೋತ್ಸಾಹ ಹಾಗೂ ಅಗತ್ಯ ನೆರವು ನೀಡುವ ಬದಲು ಸ್ಥಾನದಿಂದಲೇ ತೆರವುಗೊಳಿಸಿರುವುದು ಅಧಿಕಾರ ದುರ್ಬಳಕೆ ಮತ್ತು ಬಲವಂತದ ಕ್ರಮವಾಗಿದೆ' ಎಂದು ಹೇಳಿದ್ದಾರೆ.

'ನ್ಯಾಯಸಮ್ಮತವಲ್ಲದ ಕಾರಣಗಳನ್ನು ನೀಡಿ, ಕ್ರಮ ಕೈಗೊಳ್ಳಲಾಗಿದೆ. ನಿರ್ಮಾಣ ಕಾಮಗಾರಿಗೆ ಎಂಜಿನಿಯರ್‌ಗಳು ಬೇಕು. ಗುತ್ತಿಗೆದಾರರಿಗೆ ಸಮಯಕ್ಕೆ ಸರಿಯಾಗಿ ಕಾರ್ಮಿಕರು ಸಿಗಬೇಕು. ಕಾಮಗಾರಿ ಹಂಚಿಕೆಯೇ ವಿಳಂಬವಾಗಿರುವಾಗ, ಕೆಲಸ ತಡವಾದದ್ದಕ್ಕೆ ಸರಪಂಚರನ್ನು ಹೇಗೆ ಹೊಣೆಯಾಗಿಸಲು ಸಾಧ್ಯ. ಹಾಗಾಗಿ, ಸಂತ್ರಸ್ತೆಗೆ ಅನಗತ್ಯ ಕಿರುಕುಳ ನೀಡಲಾಗಿದೆ ಮತ್ತು ಸುಳ್ಳು ಆಪಾದನೆ ಮೇಲೆ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಪರಿಗಣಿಸುತ್ತೇವೆ' ಎಂಬುದಾಗಿ ಹೇಳಿದ್ದಾರೆ.

'ಮಹಿಳೆಯು ತಮ್ಮ ಅವಧಿ ಮುಗಿಯುವ ವರೆಗೆ ಸರಪಂಚ್‌ ಆಗಿ ಮುಂದುವರಿಯಲಿದ್ದಾರೆ. ದೂರುದಾರರು ಕಿರುಕುಳಕ್ಕೆ ಒಳಗಾಗಿರುವುದರಿಂದ, ಅವರಿಗೆ ಸರ್ಕಾರವು ₹ 1 ಲಕ್ಷ ಪರಿಹಾರ ನೀಡಬೇಕು. ಒಂದು ವಾರದ ಒಳಗೆ ಹಣ ಬಿಡುಗಡೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಂದ ಅದನ್ನು ಸರ್ಕಾರ ವಸೂಲಿ ಮಾಡಬೇಕು' ಎಂದು ಪೀಠ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.