ADVERTISEMENT

ಸಾಕ್ಷಿಗಳನ್ನು ಬೆದರಿಸಿದ ಆರೋಪ: ಪೊಲೀಸರ ವಿರುದ್ಧ ತನಿಖೆ ನಡೆಸಲು ಡಿಜಿಪಿಗೆ ಸೂಚನೆ

ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 15:54 IST
Last Updated 6 ಏಪ್ರಿಲ್ 2024, 15:54 IST
   

ನವದೆಹಲಿ: ದೂರುದಾರರ ಪರ ಸಾಕ್ಷಿ ಹೇಳಲು ಬಂದಿದ್ದವರಿಗೆ ಹೇಗೆ ಸಾಕ್ಷಿ ಹೇಳಬೇಕು ಎಂದು ಹೇಳಿಕೊಟ್ಟ ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ತಮಿಳುನಾಡು ಪೊಲೀಸ್‌ ಮಹಾನಿರ್ದೇಶಕರಿಗೆ (ಡಿಜಿಪಿ) ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಪೊಲೀಸರ ಈ ಕೃತ್ಯವು ‘ನಿರ್ಲಜ್ಜ’ ಮತ್ತು ‘ಆತಂಕಕಾರಿ’ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

2007ರಲ್ಲಿ ನಡೆದಿದ್ದ ಬಾಲಮುರುಗನ್‌ ಎಂಬುವವರ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಮಣಿಕಂದನ್, ಮತ್ತೊಬ್ಬ ವ್ಯಕ್ತಿಯನ್ನು ಬಿಡುಗಡೆಗೊಳಿಸಿದ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌. ಒಕಾ ಮತ್ತು ಉಜ್ವಲ್ ಭುಯಿಯಾ ಅವರಿದ್ದ ನ್ಯಾಯಪೀಠವು ಏಪ್ರಿಲ್‌ 5ರಂದು ಹೀಗೆ ಹೇಳಿದೆ.

ಮೃತವ್ಯಕ್ತಿ ಪರ ಐವರನ್ನು, ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವ ಹಿಂದಿನ ದಿನ ಪೊಲೀಸ್‌ ಠಾಣೆಗೆ ಕರೆಸಿಕೊಂಡು, ಆರೋಪಿ ವಿರುದ್ಧ ಹೇಗೆ ಸಾಕ್ಷಿ ಹೇಳಬೇಕು ಎಂದು ಪೊಲೀಸರು ಹೇಳಿಕೊಟ್ಟಿದ್ದರು. ಸಾಕ್ಷಿ ಹೇಳಲು ಬಂದಿದ್ದ ಎಲ್ಲರೂ ಮೃತವ್ಯಕ್ತಿಯ ಆಪ್ತರಾಗಿದ್ದರು. ಆದರೆ, ಅವರು ಹೇಳಿರುವ ಸಾಕ್ಷಿಯು ಪೊಲೀಸರು ಹೇಳಿಕೊಟ್ಟಿರುವ ಸಾಕ್ಷಿ ಆಗಿರುವ ಸಾಧ್ಯತೆ ಇರುವುದರಿಂದ ಅವರ ಸಾಕ್ಷಿಗಳನ್ನು ಪರಿಗಣಿಸಲಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಈ ಸೂಕ್ಷ್ಮ ಸಂಗತಿಯನ್ನು ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್‌ ಗಮನಿಸದೇ ಇದ್ದುದು ಆಶ್ಚರ್ಯ ತರಿಸಿದೆ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.