ADVERTISEMENT

ವಾಟ್ಸ್ಆ್ಯಪ್ ನಿಷೇಧ ಕೋರಿದ್ದ ಪಿಐಎಲ್‌ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2024, 6:38 IST
Last Updated 15 ನವೆಂಬರ್ 2024, 6:38 IST
<div class="paragraphs"><p>ಸುಪ‍್ರೀಂ ಕೋರ್ಟ್  ಹಾಗೂ ವಾಟ್ಸ್‌ಆ್ಯಪ್</p></div>

ಸುಪ‍್ರೀಂ ಕೋರ್ಟ್ ಹಾಗೂ ವಾಟ್ಸ್‌ಆ್ಯಪ್

   

ನವದೆಹಲಿ: ಐಟಿ ನಿಯಮಗಳನ್ನು ಪಾಲಿಸದ ವಾಟ್ಸ್‌ಆ್ಯ‍ಪ್‌ಗೆ ನಿಷೇಧ ಹೇರಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋ‌ರ್ಟ್ ಗುರುವಾರ ತಳ್ಳಿ ಹಾಕಿದೆ.

ನ್ಯಾಯಮೂರ್ತಿಗಳಾದ ಎಂ.ಎಂ ಸುಂದರೇಶ್ ಹಾಗೂ ಅರವಿಂದ ಕುಮಾರ್ ಅವರಿದ್ದ ನ್ಯಾಯ‍ಪೀಠ ಈ ಬಗ್ಗೆ ತೀರ್ಪು ನೀಡಿದೆ.

ADVERTISEMENT

ಸರ್ಕಾರ ಹೊರಡಿಸಿರುವ ಐಟಿ ನಿಯಮಗಳನ್ನು ವಾಟ್ಸ್‌ಆ್ಯಪ್‌ ಪಾಲಿಸುತ್ತಿಲ್ಲ. ಹೀಗಾಗಿ ಅದನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಓಮನ್‌ಕುಟ್ಟನ್ ಕೆ.ಜಿ. ಎಂಬುವವರು ಕೇರಳ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು.

2021ರಲ್ಲಿ ಕೇರಳ ಹೈಕೋರ್ಟ್ ಅದನ್ನು ತಿರಸ್ಕರಿಸಿತ್ತು. ಅಲ್ಲದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಆ್ಯಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಭದ್ರತೆ ಇರುವುದರಿಂದ ಸಂದೇಶಗಳ ಮೂಲವನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಹೀಗಾಗಿ 2021ರ ಐಟಿ ನಿಯಮಗಳಿಗೆ ಒಳಪಡುವುದಿಲ್ಲ ಎಂದು ವಾಟ್ಸ್ಆ್ಯಪ್ ದೆಹಲಿ ಹೈಕೋರ್ಟ್‌ಗೆ ನೀಡಿದ ಹೇಳಿಕೆಯನ್ನು ಅರ್ಜಿದಾರರು ಕೇರಳ ಹೈಕೋರ್ಟ್‌ನಲ್ಲಿ ಉಲ್ಲೇಖಿಸಿದ್ದರು.

ಇದೇ ವೇಳೆ, ‘ ಕೆಲವು ಸಂದರ್ಭಗಳಲ್ಲಿ ಬಳಕೆದಾರರು ಕಳುಹಿಸಿದ ಸಂದೇಶಗಳನ್ನು ಸಂಗ್ರಹಿಸಲಾಗುತ್ತದೆ. ಅವರ ಸಂಪರ್ಕಗಳು ಮತ್ತು ಇತರ ಮಾಹಿತಿಯನ್ನು ಪಡೆಯಲಾಗುತ್ತದೆ’ ಎನ್ನುವ ವಾಟ್ಸ್ಆ್ಯಪ್‌ನ ಗೋಪ್ಯತಾ ನೀತಿಯ ಬಗ್ಗೆಯೂ ಕೋರ್ಟ್ ಗಮನಕ್ಕೆ ತಂದಿದ್ದರು.

ಇದಲ್ಲದೆ, ಆ್ಯಪ್‌ನಲ್ಲಿ ಭದ್ರತೆ ಕೊರತೆಯಿದೆ, ರಾಷ್ಟ್ರ ವಿರೋಧಿ, ಸುಳ್ಳು ಸುದ್ದಿ ಮತ್ತು ಚಿತ್ರಗಳನ್ನು ಹರಡುವ ಸಮಾಜ ವಿರೋಧಿ ಅಂಶಗಳಿಂದ ತುಂಬಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ನ್ಯಾಯಾಲಯದ ಸಮನ್ಸ್ ಮತ್ತು ಕಾನೂನು ನೋಟಿಸ್‌ಗಳನ್ನು ಸಲ್ಲಿಸಲು ವಾಟ್ಸಾಪ್ ನಂತಹ ಸೇವೆಗಳ ಮೇಲೆ ಇಟ್ಟಿರುವ ನಂಬಿಕೆ ಅಪಾಯದಲ್ಲಿದೆ. ಇಂತವುಗಳ ನೈಜತೆ ಖಚಿತಪಡಿಸಿಕೊಳ್ಳಲಾಗುವುದಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಈ ವಾದಕ್ಕೆ ಮನ್ನಣೆ ಕೊಡದೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ತಳ್ಳಿ ಹಾಕಿದೆ.

(ಬಾರ್ ಆ್ಯಂಡ್ ಬೆಂಚ್ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.