ನವದೆಹಲಿ: ಬಿಲ್ಕಿಸ್ ಬಾನು ಪ್ರಕರಣದಲ್ಲಿ ತಮಗೆ ಕ್ಷಮಾದಾನ ನೀಡಿದ್ದನ್ನು ರದ್ದುಗೊಳಿಸಿ ಜನವರಿ 8ರಂದು ತಾನು ನೀಡಿದ್ದ ಆದೇಶ ಪ್ರಶ್ನಿಸಿ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಪ್ರಕರಣದ 11 ಅಪರಾಧಿಗಳ ಪೈಕಿ ರಾಧೇಶ್ಯಾಮ್ ಭಗವಾನ್‌ದಾಸ್ ಶಾ ಮತ್ತು ರಾಜುಭಾಯ್ ಬಾಬುಲಾಲ್ ಸೋನಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿ, ‘ಈ ಅರ್ಜಿ ತಪ್ಪು ಗ್ರಹಿಕೆಯಿಂದ ಕೂಡಿದೆ. ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು ನೀಡಿರುವ ಆದೇಶದ ವಿರುದ್ಧ ಇಲ್ಲಿ ಮೇಲ್ಮನವಿ ಸಲ್ಲಿಸಲು ಹೇಗೆ ಸಾಧ್ಯ’ ಎಂದು ಹೇಳಿ, ಅರ್ಜಿಯನ್ನು ವಜಾಗೊಳಿಸಿತು.
‘ಇದೆಂಥ ಅರ್ಜಿ? ಈ ಅರ್ಜಿ ಸಮರ್ಥನೀಯವೇ? ಸಂವಿಧಾನದ 32ನೇ ವಿಧಿಯಡಿ ಅರ್ಜಿ ಸಲ್ಲಿಸಲು ಸಾಧ್ಯವೇ’ ಎಂದೂ ಪೀಠ ಅರ್ಜಿದಾರರ ಪರ ಹಾಜರಿದ್ದ ವಕೀಲರನ್ನು ಪ್ರಶ್ನಿಸಿತು.
ಆಗ, ಈ ಇಬ್ಬರು ಅಪರಾಧಿಗಳ ಪರ ಹಾಜರಿದ್ದ ವಕೀಲ ರಿಷಿ ಮಲ್ಹೋತ್ರ ಅವರು, ಅರ್ಜಿಯನ್ನು ಹಿಂತೆಗೆದುಕೊಳ್ಳಲು ಅನುಮತಿ ನೀಡುವಂತೆ ಕೋರಿದರು. ಪೀಠ ಇದಕ್ಕೆ ಸಮ್ಮತಿಸಿತು.
ಮಧ್ಯಂತರ ಜಾಮೀನು ಕೋರಿ ರಾಧೇಶ್ಯಾಮ್ ಶಾ ಅರ್ಜಿ ಸಲ್ಲಿಸಿದ್ದಾನೆ.
ಪ್ರಕರಣದ ಎಲ್ಲ 11 ಜನ ಅಪರಾಧಿಗಳಿಗೆ ಗುಜರಾತ್ ಸರ್ಕಾರ ಕ್ಷಮಾದಾನ ನೀಡಿತ್ತು. ಈ ಕಾರಣಕ್ಕೆ, ಶಿಕ್ಷೆಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಅವರನ್ನು ಬಿಡುಗಡೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರದ ಕ್ರಮವನ್ನು ರದ್ದುಪಡಿಸಿ ಜನವರಿ 8ರಂದು ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.