ADVERTISEMENT

ಹಿಂದುತ್ವ ರಕ್ಷಣೆಗೆ ಮಾರ್ಗಸೂಚಿ: ಕೇಂದ್ರಕ್ಕೆ ನಿರ್ದೇಶನ ಕೋರಿದ್ದ ಅರ್ಜಿ ವಜಾ

ಪಿಟಿಐ
Published 10 ನವೆಂಬರ್ 2023, 7:15 IST
Last Updated 10 ನವೆಂಬರ್ 2023, 7:15 IST
   

ನವದೆಹಲಿ: ಭಾರತದಲ್ಲಿ ಹಿಂದುತ್ವದ ‘ರಕ್ಷಣೆ’ಗಾಗಿ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾ ಮಾಡಿತು.

ನ್ಯಾಯಮೂರ್ತಿ ಸಂಜಯ್‌ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠವು, ‘ಇಂಥ ಮನವಿಗಳನ್ನು ಒಳಗೊಂಡ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸುವುದಿಲ್ಲ‘ ಎಂದು ಸ್ಪಷ್ಟಪಡಿಸಿತು.

ಮನವಿಯನ್ನು ಉಲ್ಲೇಖಿಸಿ, ‘ಕೆಲವರು ಭಾರತದಲ್ಲಿ ಇಸ್ಲಾಂ ಸಂರಕ್ಷಿಸಿ, ಇನ್ನೂ ಕೆಲವರು ಕ್ರೈಸ್ತಧರ್ಮ ಸಂರಕ್ಷಿಸಿ ಎನ್ನಬಹುದು’ ಎಂದೂ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್‌ ಅಮಾನ್‌ಉಲ್ಲಾ ಈ ಪೀಠದ ಇತರ ಸದಸ್ಯರು.

ADVERTISEMENT

ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಈ ಸಂಬಂಧ ಅರ್ಜಿ ಸಲ್ಲಿಸಿದ್ದು, ವಾದ ಮಂಡಿಸಲು ಸ್ವತಃ ಹಾಜರಿದ್ದರು. ಅರ್ಜಿದಾರರು ಶಿಕ್ಷಣದ ಪಠ್ಯಕ್ರಮವೊಂದನ್ನು ಉಲ್ಲೇಖಿಸಿದಾಗ, ‘ಪಠ್ಯಕ್ರಮವನ್ನು ರೂಪಿಸುವುದು ಸರ್ಕಾರ’ ಎಂದು ಪೀಠ ಹೇಳಿತು.

‘ಅರ್ಜಿದಾರರು ತನಗೇ ಏನು ಬೇಕೋ ಅದನ್ನು ಇತರರು ಪಾಲಿಸಬೇಕು ಎಂದು ಹೇಳಲಾಗದು. ನಿಮಗನ್ನಿಸಿದ್ದನ್ನು ನೀವು ಪ್ರಚಾರ ಮಾಡಿ. ಯಾರು ತಡೆಯುವುದಿಲ್ಲ. ಆದರೆ, ಎಲ್ಲರೂ ಅದನ್ನೇ ಪಾಲಿಸಬೇಕು ಎಂದು ಹೇಳಬೇಡಿ’ ಎಂದು ಅರ್ಜಿ ವಜಾಗೊಳಿಸಿದ ಪೀಠ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.