ADVERTISEMENT

ಛಡ್ಡಾ ಪ್ರಕರಣ | ಸಂಸದರೊಬ್ಬರ ಅನಿರ್ದಿಷ್ಟಾವಧಿ ಅಮಾನತು ಸರಿಯಲ್ಲ: ಸುಪ್ರೀಂಕೋರ್ಟ್

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2023, 19:35 IST
Last Updated 30 ಅಕ್ಟೋಬರ್ 2023, 19:35 IST
<div class="paragraphs"><p>ರಾಘವ್‌ ಛಡ್ಡಾ</p></div>

ರಾಘವ್‌ ಛಡ್ಡಾ

   

ನವದೆಹಲಿ: ಸಂಸದರೊಬ್ಬರನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸುವುದರಿಂದ ಆತ ಪ್ರತಿನಿಧಿಸುವ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಆಮ್‌ ಆದ್ಮಿ ಪಕ್ಷದ ಸಂಸದ ರಾಘವ ಛಡ್ಡಾ ವಿರುದ್ಧ ಕ್ರಮ ಕೈಗೊಂಡಿರುವುದಕ್ಕೆ ಕಾರಣವಾದ ಅಂಶಗಳ ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಸಂಸತ್‌ನಲ್ಲಿ ಭಿನ್ನದನಿಗೆ ಅವಕಾಶ ಇರಲೇಬೇಕು. ಹೀಗಾಗಿ ವಿಪಕ್ಷದ ಸಂಸದನನ್ನು ಸದನದಿಂದ ಅನಿರ್ದಿಷ್ಟಾವಧಿಗೆ ಅಮಾನತು ಮಾಡುವುದು ಗಂಭೀರ ವಿಷಯ ಎಂದು ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಅವರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಹೇಳಿದೆ. 

ADVERTISEMENT

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ, ‘ನಾವು ಎಲ್ಲಿಯೇ ಇರಲಿ, ಯಾರೇ ಆಗಿರಲಿ ಎಲ್ಲರೂ ಸಂವಿಧಾನಕ್ಕೆ ತಲೆಬಾಗಲೇ ಬೇಕು’ ಎಂದು ಪೀಠ ಹೇಳಿತು.

ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರೂ ಪೀಠದಲ್ಲಿ ಇದ್ದಾರೆ.

‘ನನ್ನ ಕಕ್ಷಿದಾರ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಲು ಇಚ್ಛಿಸುತ್ತಾರೆ’ ಎಂದು ರಾಘವ ಛಡ್ಡಾ ಪರ ಹಾಜರಿದ್ದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ನ್ಯಾಯಪೀಠಕ್ಕೆ ಹೇಳಿದರು.

‘ಅವರು (ಛಡ್ಡಾ) ಸದನದ ಕ್ಷಮೆ ಕೋರಲು ಸಿದ್ಧರಿದ್ದಾರೆ. ‌ರಾಜ್ಯಸಭೆ ಸಭಾಪತಿ ಅವರು ಕ್ಷಮೆಯನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೇ? ಕಾನೂನು ಪಾಲನೆಯಾಗುವಂತೆ ಸುಪ್ರೀಂ ಕೋರ್ಟ್‌ ಕ್ರಮಕೈಗೊಳ್ಳುವ ಅಗತ್ಯವಿದೆಯೇ’ ಎಂದು ಕೇಳಿದ ಪೀಠ, ಈ ವಿಷಯದಲ್ಲಿ ನಿಮಗೇ ಆಯ್ಕೆ ನೀಡಲಾಗುವುದು ಎಂದು ಹೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ವೆಂಕಟರಮಣಿ, ‘ಈ ವಿಷಯದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಬಾರದು. ಅದು ಸಮರ್ಥನೀಯವೂ ಅಲ್ಲ’ ಎಂದು ಹೇಳಿದರು.

ಎರಡೂ ಪಕ್ಷದವರ ವಾದಗಳನ್ನು ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.