ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ರೂಪಿಸುವ ವಿಚಾರವಾಗಿ ಚರ್ಚೆ ನಡೆಸಲು ಸುಪ್ರೀಂ ಕೋರ್ಟ್ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಆಹ್ವಾನ ನೀಡಲು ಒಲವು ತೋರಿಸಿದೆ.
‘ಈ ವಿಚಾರದಲ್ಲಿ ಸಚಿವರಿಗೆ ವಿಶಿಷ್ಠ ಕಲ್ಪನೆಗಳಿವೆ. ಆದ್ದರಿಂದ ಅವರು ಕೋರ್ಟ್‌ಗೆ ಆಗಮಿಸಿ ನಮಗೆ ನೆರವಾಗಬೇಕು ಎಂದು ನಾವು ಬಯಸುತ್ತೇವೆ. ನಮ್ಮೊಂದಿಗೆ ಸಹಕರಿಸುವ ಸ್ಥಾನದಲ್ಲಿ ಅವರಿದ್ದಾರೆ,‘ ಎಂದು ಪೀಠದ ಮುಖ್ಯಸ್ಥರಾದ ಮುಖ್ಯನ್ಯಾಯಮೂರ್ತಿ ಎಸ್‌ಎ ಬೋಬಡೆ ಅವರು ಹೇಳಿದ್ದಾರೆ.
‘ನಮ್ಮ ಜೊತೆ ಸಮಾಲೋಚನೆಗೆ ಸಚಿವರು ಆಗಮಿಸಬೇಕು ಎಂದು ಕೋರ್ಟ್ ಸಮನ್ಸ್ ನೀಡುತ್ತಿದೆ ಎಂದು ಭಾವಿಸಬೇಕಿಲ್ಲ. ಬದಲಿಗೆ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ಎಲೆಕ್ಟ್ರಿಕ್ ವಾಹನಗಳ ಕುರಿತ ನೀತಿ ನಿರೂಪಣೆ ವಿಚಾರದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸರ್ಕಾರದಿಂದ ಸೂಕ್ತ ವ್ಯಕ್ತಿಯೊಬ್ಬರು ಇರಬೇಕೆಂದು ನಾವು ಬಯಸುತ್ತೇವೆ,’ ಎಂದು ಪೀಠ ತಿಳಿಸಿತು.
ಎಲೆಕ್ಟ್ರಿಕ್ ವಾಹನಗಳ ಕುರಿತಂತೆ ಸರ್ಕಾರದ ನೀತಿ ನಿಯಮಗಳ ಜಾರಿ ವಿಚಾರದಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿದಾರರ ಪರ ವಾದಿಸುತ್ತಿದ್ದಾರೆ. ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿ ಎಲೆಕಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡಬೇಕು ಎಂದು ಅವರು ವಾದಿಸಿದ್ದಾರೆ.
ಇದೇ ವಿಚಾರವಾಗಿ ತನ್ನ ಅಭಿಪ್ರಾಯ ದಾಖಲಿಸಿರುವ ಕೋರ್ಟ್, ’ಪಟಾಕಿ ಮತ್ತು ಉರುವಲುಗಳ ಸಮಸ್ಯೆ ಆಗಾಗ ಕಾಣಿಸಿಕೊಳ್ಳುವಂಥವು. ಆದರೆ, ಮಾಲಿನ್ಯಕ್ಕೆ ವಾಹನಗಳ ಪಾಲು ದೊಡ್ಡದು. ಈ ಸಮಸ್ಯೆಯನ್ನು ನಾವು ಸಮಗ್ರವಾಗಿ ಪರಿಗಣಿಸಬೇಕಾಗಿದೆ’ ಎಂದು ನ್ಯಾಯಮೂರ್ತಿ ಬೋಬಡೆ ಹೇಳಿದರು.
‘ನ್ಯಾಯಾಲಯದ ಎದುರು ಬಾಕಿ ಉಳಿದಿರುವ ಹಲವು ಪ್ರಕರಣಗಳೊಂದಿಗೆ ಎಲೆಕ್ಟ್ರಿಕ್ ವಾಹನಗಳ ವಿಚಾರಗಳೂ ಸಂಪರ್ಕಗೊಂಡಿವೆ. ಈ ವಿಚಾರಗಳೆಲ್ಲವೂ ವಾಹನದ ಇಂಧನ, ಸಾರ್ವಜನಿಕ ಮತ್ತು ವೈಯಕ್ತಿಯ ಸಂಗತಿಗಳೊಂದಿಗೆ ಸಂಪರ್ಕಗೊಂಡಿವೆ. ಇದೆಲ್ಲವೂ ಪರಿಸರದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಲಿವೆ. ಇದು ಕೇವಲ ದೆಹಲಿಗೆ ಮಾತ್ರ ಸಂಬಂಧಪಟ್ಟದ್ದಲ್ಲ ಇಡೀ ದೇಶಕ್ಕೆ ಅನ್ವಯಿಸುವುಂಥವು,’ ಎಂದೂ ಮುಖ್ಯನ್ಯಾಯಮೂರ್ತಿ ಬೋಬಡೆ ಹೇಳಿದರು.
ಇನ್ನು ಈ ಪ್ರಕರಣವನ್ನು ನಾಲ್ಕುವಾರಗಳಿಗೆ ಮುಂದೂಡಿದ ಕೋರ್ಟ್ ಅಂದು ಸರ್ಕಾರ ತನ್ನ ಪ್ರತಿಕ್ರಿಯೆಯನ್ನೂ ಸಲ್ಲಿಸಬೇಕು ಎಂದು ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.