ADVERTISEMENT

ಬೆಂಗಳೂರಿನ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಪತ್ರಕರ್ತ ಶಂಕರ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 2:16 IST
Last Updated 24 ಫೆಬ್ರುವರಿ 2023, 2:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಪತ್ರಕರ್ತ ಹಲ್ಲೆಗೆರೆ ಶಂಕರ್ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಜಾಮೀನು ನೀಡಿದೆ.

2022ರ ಡಿಸೆಂಬರ್‌ 16ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್‌ ಆದೇಶದ ವಿರುದ್ಧ ಅರ್ಜಿದಾರರು ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ದಿನೇಶ್‌ ಮಹೇಶ್ವರಿ ಹಾಗೂ ಸಂಜಯ್ ಕುಮಾರ್‌ ಪೀಠ ಅಂಗೀಕರಿಸಿತು.

ತಿಗಳರಪಾಳ್ಯದಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) 2021ರ ಸೆಪ್ಟೆಂಬರ್‌ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧೂರಾಣಿ ಅವರ ಒಂಬತ್ತು ತಿಂಗಳ ಮಗು ಸಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ‘ಮಗುವಿನದ್ದು ಕೊಲೆ’ ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು.

ADVERTISEMENT

ನಾಲ್ವರ ಆತ್ಮಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಬ್ಯಾಡರಹಳ್ಳಿ ಪೊಲೀಸರು, ಭಾರತಿ ಅವರ ಪತಿಯಾದ ಪತ್ರಕರ್ತ ಹಲ್ಲೆಗೆರೆ ಶಂಕರ್ ಹಾಗೂ ಇಬ್ಬರು ಅಳಿಯಂದಿರ ವಿರುದ್ಧ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಳಿಯ ಇ.ಎಸ್‌.ಪ್ರವೀಣ್‌ ಕುಮಾರ್ ಅವರನ್ನು 2021ರ ಅಕ್ಟೋಬರ್ 1ರಂದು ಬಂಧಿಸಿದ್ದರು. ಶಂಕರ್ ಜಾಮೀನು ಅರ್ಜಿಯನ್ನು ಹೈಕೋರ್ಟ್‌ 2022ರ ಮೇ 19ರಂದು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಶಂಕರ್ ಸುಪ್ರೀಂ ಕೋರ್ಟ್
ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎ.ಎನ್‌.ವೇಣುಗೋಪಾಲ ಗೌಡ, ಬಾಲಾಜಿ ಶ್ರೀನಿವಾಸನ್‌, ‘ಪ್ರಕರಣದ ಆರೋಪಿಗಳಾದ ಇಬ್ಬರು ಅಳಿಯಂದಿರು ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ’ ಎಂದರು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.