ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಆರೋಪದಡಿ ಬಂಧಿಸಲಾಗಿರುವ ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿತು.
ಎರಡೂ ಪ್ರಕರಣಗಳಿಗೆ ಸಂಬಂಧಿಸಿ ತಲಾ ₹10 ಲಕ್ಷ ಮೌಲ್ಯದ ಎರಡು ಬಾಂಡ್ ನೀಡಬೇಕು. ವಿಚಾರಣಾ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಹಾಗೂ ಸಾಕ್ಷ್ಯ ನಾಶ ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮುಂದಾಗಬಾರದು ಎಂದೂ ಪೀಠವು ಷರತ್ತು ವಿಧಿಸಿತು.
ಕವಿತಾ ಅವರನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನ ಅವರ ನಿವಾಸದಿಂದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಮಾರ್ಚ್15ರಂದು ಬಂಧಿಸಿದ್ದರು. ತಿಹಾರ್ ಜೈಲಿನಲ್ಲಿ ಇರುವಂತೆಯೇ ಕವಿತಾ ಅವರನ್ನು ಇದೇ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಕೂಡ ಏಪ್ರಿಲ್ 11ರಂದು ಬಂಧಿಸಿದ್ದರು.
ಐದು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಕವಿತಾ ಈ ತೀರ್ಪಿನೊಂದಿಗೆ ನಿರಾಳರಾಗಿದ್ದಾರೆ. ತಮ್ಮ ಮೇಲಿನ ಆರೋಪಗಳನ್ನು ಕವಿತಾ ಅವರು ಈಗಾಗಲೇ ಅಲ್ಲಗಳೆದಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಕೆ.ವಿ.ವಿಶ್ವನಾಥನ್ ಅವರಿದ್ದ ಪೀಠವು, ‘ತನಿಖೆಯನ್ನು ಪೂರ್ಣಗೊಳಿಸಲು ಈ ಹಂತದಲ್ಲಿ ಕವಿತಾ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ’ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು. ಹಗರಣದ ಸಂಬಂಧ ಸಿಬಿಐ ಮತ್ತು ಇ.ಡಿ ತನಿಖೆ ನಡೆಸುತ್ತಿವೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕವಿತಾ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಜುಲೈ 1ರಂದು ವಜಾ ಮಾಡಿತ್ತು.
ದೆಹಲಿಯ ಅಬಕಾರಿ ನೀತಿ ರಚನೆ ಮತ್ತು ಅದರ ಅನುಷ್ಠಾನ ಪ್ರಕ್ರಿಯೆಯಲ್ಲಿ ಕವಿತಾ ಅವರು ಕ್ರಿಮಿನಲ್ ಸಂಚು ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಜಾಮೀನು ನಿರಾಕರಿಸಲು ಹೈಕೋರ್ಟ್ ಕಾರಣ ನೀಡಿತ್ತು.
ಕವಿತಾ ಪರವಾಗಿ ವಾದಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ‘ಎರಡೂ ತನಿಖಾ ಸಂಸ್ಥೆಗಳು ಈಗಾಗಲೇ ಅವರನ್ನು ಪ್ರಶ್ನೆಗೊಳಪಡಿಸಿವೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿದರು.
ಇದೇ ಪ್ರಕರಣದ ಸಹ ಆರೋಪಿ, ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಆಗಸ್ಟ್ 9ರಂದು ಜಾಮೀನು ಮಂಜೂರು ಮಾಡಿದೆ ಎಂಬ ಬಗ್ಗೆಯೂ ಗಮನಸೆಳೆದರು.
ತನಿಖಾ ಸಂಸ್ಥೆಗಳನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು, ‘ಕವಿತಾ ಅವರನ್ನು ತಮ್ಮ ಮೊಬೈಲ್ ಫೋನ್ ಅನ್ನು ನಾಶಪಡಿಸಿದ್ದಾರೆ. ಈ ವರ್ತನೆಯು ಸಾಕ್ಷ್ಯ ನಾಶಪಡಿಸುವುದಕ್ಕೆ ಸಮನಾಗಿದೆ’ ಎಂದರು. ಇದನ್ನು ‘ಬೋಗಸ್’ ಎಂದು ರೋಹಟಗಿ ತಳ್ಳಿಹಾಕಿದರು.
ಬಿಡುಗಡೆಗೆ ವಾರಂಟ್: ‘ಸುಪ್ರಿಂ’ ಆದೇಶದ ಬಳಿಕ ದೆಹಲಿಯ ಕೋರ್ಟ್‌ನ ನ್ಯಾಯಾಧೀಶರಾದ ಕಾವೇರಿ ಭವೇಜಾ ಅವರು, ಕವಿತಾ ಅವರ ಬಿಡುಗಡೆಗೆ ಸೂಚಿಸಿ ವಾರಂಟ್ ಜಾರಿ ಮಾಡಿದರು.
‘ಆರೋಪ ಸಾಬೀತಿಗೆ ಏನು ಸಾಕ್ಷ್ಯಗಳಿವೆ?’
ನವದೆಹಲಿ: ಹಗರಣದಲ್ಲಿ ಕವಿತಾ ಪಾತ್ರವಿದೆ ಎಂದು ದೃಢಪಡಿಸಲು ನಿಮ್ಮ ಬಳಿ ಏನು ಸಾಕ್ಷ್ಯಗಳಿವೆ ಎಂದು ಸುಪ್ರೀಂ ಕೋರ್ಟ್ ಪೀಠವು ತನಿಖಾ ಸಂಸ್ಥೆಗಳನ್ನು ಪ್ರಶ್ನಿಸಿತು. ತನಿಖೆ ಎಷ್ಟು ನ್ಯಾಯೋಚಿತವಾಗಿದೆ ಎಂದು ತನಿಖಾ ಸಂಸ್ಥೆಗಳಿಗೆ ಪ್ರಶ್ನಿಸಿದ ಪೀಠ ‘ನಿರ್ದಿಷ್ಟವಾಗಿ ಕೆಲವರ ಗುರುತಿಸಿ ತನಿಖೆಗೆ ಒಳಪಡಿಸಲಾಗುತ್ತಿದೆ’ ಎಂದು ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.