ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ಜೈಲಿನಿಂದ ಬಿಡುಗಡೆಯಾದ ಚಿದಂಬರಂ

ಜಾಮೀನು: 105 ದಿನಗಳ ಜೈಲುವಾಸದಿಂದ ಮುಕ್ತಿ

ಪಿಟಿಐ
Published 4 ಡಿಸೆಂಬರ್ 2019, 18:23 IST
Last Updated 4 ಡಿಸೆಂಬರ್ 2019, 18:23 IST
ಚಿದಂಬರಂ
ಚಿದಂಬರಂ   

ನವದೆಹಲಿ: ಹಣದ ಅಕ್ರಮ ವರ್ಗಾವಣೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿ, 105 ದಿನಗಳಿಂದ ತಿಹಾರ್‌ ಜೈಲಿನಲ್ಲಿದ್ದ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರಿಗೆ ಸುಪ್ರೀಂ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿದೆ.

ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಅವರು ಬುಧವಾರ ರಾತ್ರಿ 8.10ಕ್ಕೆ ಜೈಲಿನಿಂದ ಹೊರಬಂದರು. ಪುತ್ರ ಕಾರ್ತಿ ಚಿದಂಬರಂ ಹಾಗೂ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಅವರಿಗೆ ಸ್ವಾಗತ ಕೋರಿದರು.

ಹೊರಬರುತ್ತಲೇ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಚಿದಂಬರಂ, ‘ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ. ಆದ್ದರಿಂದ ಪ್ರಕರಣದ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ನನ್ನ ವಿರುದ್ಧದ ಯಾವ ಆರೋಪವೂ ಸಾಬೀತಾಗಿಲ್ಲ ಎಂದು ಮಾತ್ರ ಹೇಳಬಲ್ಲೆ’ ಎಂದರು.

ADVERTISEMENT

ಚಿದಂಬರಂ ಅವರಿಗೆ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್‌ ನವೆಂಬರ್‌ 15ರಂದು ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ, ಎ.ಎಸ್‌. ಬೋಪಣ್ಣ ಹಾಗೂ ಋಷಿಕೇಶ್‌ ರಾಯ್‌ ಅವರನ್ನೊಳಗೊಂಡ ಪೀಠವು ತಳ್ಳಿಹಾಕಿದೆ.

‘ಜೈಲಿನಿಂದ ಬಿಡುಗಡೆಯಾದರೆ ಚಿದಂಬರಂ ಅವರು ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ’ ಎಂಬ ಜಾರಿ ನಿರ್ದೇಶನಾಲಯದ (ಇ.ಡಿ) ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು, ‘ಆರೋಪಿಯು ರಾಜಕೀಯವಾಗಿ ಯಾವುದೇ ಅಧಿಕಾರವನ್ನು ಹೊಂದಿಲ್ಲ. ಸರ್ಕಾರದಲ್ಲಿ ಯಾವ ಹುದ್ದೆಯನ್ನೂ ನಿಭಾಯಿಸುತ್ತಿಲ್ಲ. ಆದ್ದರಿಂದ ಜಾರಿ ನಿರ್ದೇಶನಾಲಯದ ವಾದವನ್ನು ಒಪ್ಪಲು ಸಾಧ್ಯವಿಲ್ಲ’ ಎಂದಿದೆ.

ಕಾಂಗ್ರೆಸ್‌ ಸ್ವಾಗತ: ಚಿದಂಬರಂ ಅವರಿಗೆ ಜಾಮೀನು ಲಭಿಸಿರುವುದಕ್ಕೆ ಕಾಂಗ್ರೆಸ್‌ ಸಂತಸ ವ್ಯಕ್ತಪಡಿಸಿದೆ. ‘ನಮ್ಮ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಸಂಚು ರೂಪಿಸಿತ್ತು. ಕೊನೆಗೂ ಸತ್ಯ ಗೆದ್ದಿದೆ. ಚಿದಂಬರಂ ಅವರನ್ನು ನಾವು ಸ್ವಾಗತಿಸುತ್ತೇವೆ’ ಎಂದು ಕಾಂಗ್ರೆಸ್‌ ಮುಖಂಡ ಅಧಿರ್‌ ರಂಜನ್‌ ಚೌಧರಿ ಹೇಳಿದ್ದಾರೆ.

ಷರತ್ತುಗಳು

*₹ 2 ಲಕ್ಷದ ವೈಯಕ್ತಿಕ ಬಾಂಡ್‌, ಇಬ್ಬರು ಜಾಮೀನುದಾರರು ಮತ್ತು ಜಾಮೀನುದಾರರಿಂದಲೂ ತಲಾ ₹ 2 ಲಕ್ಷದ ಭದ್ರತಾ ಠೇವಣಿ ಒದಗಿಸಬೇಕು.

*ಮಾಧ್ಯಮ ಸಂದರ್ಶನದಲ್ಲಾಗಲಿ, ಸಾರ್ವಜನಿಕವಾಗಿಯಾಗಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡುವಂತಿಲ್ಲ.

*ಯಾವುದೇ ಸಾಕ್ಷ್ಯಗಳನ್ನು ತಿದ್ದಬಾರದು, ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಪ್ರತ್ನವನ್ನೂ ಮಾಡಬಾರದು

*ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರಗೆ ಹೋಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.