ADVERTISEMENT

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2022, 19:38 IST
Last Updated 18 ಮೇ 2022, 19:38 IST
ಇಂದ್ರಾಣಿ ಮುಖರ್ಜಿ
ಇಂದ್ರಾಣಿ ಮುಖರ್ಜಿ   

ನವದೆಹಲಿ: ತಮ್ಮ ಮಗಳು ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಇಂದ್ರಾಣಿ ಮುಖರ್ಜಿ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಜಾಮೀನು ನೀಡಿದೆ.

ಇಂದ್ರಾಣಿ ಅವರು 2015ರಿಂದ ಜೈಲಿನಲ್ಲಿದ್ದಾರೆ. ಪ್ರಕರಣದಲ್ಲಿ 237 ಸಾಕ್ಷಿಗಳ ಪಟ್ಟಿ ಮಾಡಲಾಗಿದೆ. ಈವರೆಗೆ 68 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಹಾಗಾಗಿ, ವಿಚಾರಣೆಯು ಸದ್ಯಕ್ಕೆ ಪೂರ್ಣಗೊಳ್ಳದು ಎಂದು ನ್ಯಾಯಮೂರ್ತಿ ಎಲ್‌.ನಾಗೇಶ್ವರ ರಾವ್‌ ನೇತೃತ್ವದ ಪೀಠವು ಹೇಳಿದೆ.

‘ಅಪರಾಧ ಒಳಸಂಚು ನಡೆಸಿ, ಮಗಳನ್ನು ಕೊಲೆ ಮಾಡುವ ಉದ್ದೇಶದಿಂದ ಅಪಹರಣ ಮಾಡಿದ ಆರೋಪ ಇಂದ್ರಾಣಿ ಅವರ ಮೇಲಿದೆ. ಇಂದ್ರಾಣಿ ಅವರು ಈ ಪ್ರಕರಣದ ಇನ್ನೊಬ್ಬ ಆರೋಪಿ ಪೀಟರ್‌ ಮುಖರ್ಜಿ ಅವರ ಹೆಂಡತಿ. ಪೀಟರ್‌ ಮುಖರ್ಜಿಗೆ ಮೊದಲ ಹೆಂಡತಿಯಲ್ಲಿ ಹುಟ್ಟಿದ ಮಗ ರಾಹುಲ್‌ ಮುಖರ್ಜಿಯ ಜತೆಗೆ ಮಗಳು ಶೀನಾ ಬೋರಾ ಸಹಜೀವನ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಮಗಳನ್ನು ಕೊಲ್ಲಲು ಇಂದ್ರಾಣಿ ಷಡ್ಯಂತ್ರ ಮಾಡಿದ್ದರು ಎಂಬುದು ಅವರ ಮೇಲಿರುವ ಆರೋಪ’ ಎಂದು ಪೀಠವು ಹೇಳಿದೆ.

ADVERTISEMENT

‘ಪ್ರಕರಣದಲ್ಲಿನ ಸರಿ ತಪ್ಪುಗಳ ಬಗ್ಗೆ ಪೀಠವು ಏನನ್ನೂ ಹೇಳುವುದಿಲ್ಲ. ಅದು ಕಕ್ಷಿದಾರರ ಹಿತಾಸಕ್ತಿಗೆ ಪ್ರತಿಕೂಲ ಆಗಬಹುದು. ಇಂದ್ರಾಣಿ ಅವರು ಆರೂವರೆ ವರ್ಷ ಜೈಲಿನಲ್ಲಿ ಇದ್ದರು ಮತ್ತು ಸಾಕ್ಷಿಗಳ ವಿಚಾರಣೆಗೆ ಇನ್ನೂ ಬಹಳ ಕಾಲ ಬೇಕು ಎಂಬುದನ್ನಷ್ಟೇ ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂದು ಪೀಠವು ತಿಳಿಸಿದೆ.

ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಇಂದ್ರಾಣಿ ಪರವಾಗಿ ವಾದಿಸಿದ್ದರು.ಇಂದ್ರಾಣಿ ಅವರ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯವು ಹಲವು ಬಾರಿ ವಜಾ ಮಾಡಿತ್ತು.

ಜಾಮೀನು ಷರತ್ತುಗಳನ್ನು ವಿಚಾರಣಾ ನ್ಯಾಯಾಲಯವು ಅಂತಿಮಗೊಳಿಸಬೇಕಿದೆ. ಅದಕ್ಕಾಗಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಅರ್ಜಿ ಸಲ್ಲಿಸುವುದಾಗಿ ಇಂದ್ರಾಣಿ ಪರ ವಕೀಲೆ ಸನಾ ರಯೀಸ್‌ ಶೇಖ್ ಹೇಳಿದ್ದಾರೆ.

ಶೀನಾ ಬೋರಾ (24) ಅವರನ್ನು 2012ರ ಏಪ್ರಿಲ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಇಂದ್ರಾಣಿ ಮುಖರ್ಜಿ, ಅವರ ಚಾಲಕನಾಗಿದ್ದ ಶ್ಯಾಮವರ್‌ ರಾಯ್‌ ಮತ್ತು ಇಂದ್ರಾಣಿ ಅವರ ಹಿಂದಿನ ಗಂಡ ಸಂಜೀವ್‌ ಖನ್ನಾ ಅವರು ಕಾರಿನಲ್ಲಿ ಶೀನಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾರೆ. ಮೃತದೇಹವನ್ನು ಕಾಡಿನಲ್ಲಿ ಸುಡಲಾಗಿದೆ ಎಂಬ ಆರೋಪ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.