ADVERTISEMENT

ಅಶ್ಲೀಲ ಚಿತ್ರ ನಿರ್ಮಾಣ: ಬಾಲಿವುಡ್ ನಟಿ ಗೆಹನಾಗೆ ‘ಸುಪ್ರೀಂ’ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 15:03 IST
Last Updated 22 ಸೆಪ್ಟೆಂಬರ್ 2021, 15:03 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   
ನವದೆಹಲಿ: ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ರಾಜ್‌ ಕುಂದ್ರಾ ಸೇರಿದಂತೆ ಹಲವರು ಬಂಧನಕ್ಕೊಳಗಾಗಿದ್ದ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಗೆಹನಾ ವಸಿಷ್ಠ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು, ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ವಜಾಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿತು.
‘ಅರ್ಜಿದಾರರನ್ನು ಬಂಧಿಸಬಾರದು. ಹಾಗೂ ಅರ್ಜಿದಾರರಾದ ಗೆಹನಾ ವಸಿಷ್ಠ್ ಅಲಿಯಾಸ್ ವಂದನಾ ರವೀಂದ್ರ ತಿವಾರಿ ಅವರಿಗೆ ತನಿಖೆಗೆ ಸಹಕರಿಸಬೇಕು’ ಎಂದು ನ್ಯಾಯಪೀಠವು ಆದೇಶ ನೀಡಿತು.
ನಟಿಯ ಪರವಾಗಿ ವಾದ ಮಂಡಿಸಿದ ವಕೀಲ ಅಜಿತ್ ವಾಘ್ ಅವರು, ‘ಜುಲೈನಲ್ಲಿ ದಾಖಲಾದ ಮೂರನೇ ಎಫ್‌ಐಆರ್‌ನಲ್ಲಿ ನಟಿಯನ್ನು ಬಂಧಿಸಲು ಕೋರಲಾಗಿದೆ. ಈ ಪ್ರಕರಣದಲ್ಲಿ ದಾಖಲಾದ ಮೊದಲ ಎರಡು ಎಫ್‌ಐಆರ್‌ಗಳಲ್ಲಿ ಈಗಾಗಲೇ ಗೆಹನಾ ಅವರು 133 ದಿನಗಳ ಕಾಲ ಬಂಧನದಲ್ಲಿದ್ದರು. ಈಗಾಗಲೇ ಪ್ರಕರಣದ ಮುಖ್ಯ ಆರೋಪಿಗೆ ಜಾಮೀನು ಮಂಜೂರಾಗಿದೆ’ ಎಂದು ಕೋರ್ಟ್ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.