ADVERTISEMENT

ದೇಶದ್ರೋಹ ಕಾನೂನಿಗೆ ‘ಸುಪ್ರೀಂ’ ತಡೆ

ಎಫ್‌ಐಆರ್‌ ದಾಖಲು, ತನಿಖೆ, ವಿಚಾರಣೆ ಇಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

​ಪ್ರಜಾವಾಣಿ ವಾರ್ತೆ
Published 11 ಮೇ 2022, 20:18 IST
Last Updated 11 ಮೇ 2022, 20:18 IST
   

ನವದೆಹಲಿ (ಪಿಟಿಐ): ಭಾರತೀಯ ದಂಡ ಸಂಹಿತೆಯ, ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್‌ 124ಎಗೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ. ತಡೆ ನೀಡಲು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವನ್ನು ತಳ್ಳಿ ಹಾಕಿದೆ.

ಬ್ರಿಟಿಷರ ಕಾಲದ ಈ ಸೆಕ್ಷನ್‌ ಕುರಿತು ಸರ್ಕಾರವು ‘ಅರ್ಹ ವೇದಿಕೆ’ಯ ಮೂಲಕ ಮರುಪರಿಶೀಲನೆ ನಡೆಸುವ ವರೆಗೆ, ಈ ಸೆಕ್ಷನ್‌ ಅಡಿಯಲ್ಲಿ ಎಫ್‌ಐಆರ್‌ ದಾಖಲು, ಈಗಾಗಲೇ ದಾಖಲಾಗಿರುವ ಪ್ರಕರಣಗಳ ತನಿಖೆ, ಬಲವಂತದ ಕ್ರಮಗಳನ್ನು ಕೈಗೊಳ್ಳ ಬಾರದು ಎಂದು ಕೋರ್ಟ್‌ ಹೇಳಿದೆ.

ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಒಳಗಾಗಿರುವ ಸೆಕ್ಷನ್‌ ಬಗ್ಗೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು ಮಹತ್ವದ ಆದೇಶ ನೀಡಿದೆ. ನಾಗರಿಕ ಸ್ವಾತಂತ್ರ್ಯ, ಪೌರರ ಹಿತಾಸಕ್ತಿ ಮತ್ತು ಸರ್ಕಾರದ ಹಿತಾಸಕ್ತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯ ಇದೆ. 124ಎಯಂತಹ ಕಠಿಣವಾದ ಸೆಕ್ಷನ್‌ ಈಗಿನ ಸಾಮಾಜಿಕ ಪರಿಸರಕ್ಕೆ ಹೊಂದಿಕೆ ಆಗುವುದಿಲ್ಲ ಎಂದೂ ನ್ಯಾಯಪೀಠವು ಹೇಳಿದೆ.

ADVERTISEMENT

ಕೇಂದ್ರದ ನಿಲುವು ಏನು?

ಈ ಸೆಕ್ಷನ್‌ ಅನ್ನು ಅಮಾನತಿನಲ್ಲಿ ಇರಿಸಲು ಸಾಧ್ಯವೇ ಎಂಬ ಬಗ್ಗೆ 24 ತಾಸುಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್‌ ಮಂಗಳವಾರ ಸೂಚಿಸಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ, ಎಸ್‌ಪಿ ದರ್ಜೆಯ ಅಧಿಕಾರಿಯು ಈ ಸೆಕ್ಷನ್‌ ಅಡಿಯಲ್ಲಿನ ಎಫ್‌ಐಆರ್‌ಗಳ ಮೇಲೆ ನಿಗಾ ಇರಿಸಬೇಕು, ವಿಚಾರಣಾರ್ಹ ಅಪರಾಧಗಳ ತನಿಖೆಗೆ ಈ ಸೆಕ್ಷನ್‌ ಅಗತ್ಯವಾದ ಕಾರಣ ಎಫ್‌ಐಆರ್‌ ದಾಖಲೆಗೆ ತಡೆ ಸಾಧ್ಯವಿಲ್ಲ. ಜತೆಗೆ, ಸಂವಿಧಾನ ಪೀಠವು 1962ರಲ್ಲಿ ಈ ಕಾನೂನನ್ನು ಎತ್ತಿ ಹಿಡಿದಿದೆಎಂದು ಕೇಂದ್ರ ಹೇಳಿದೆ. ಆದರೆ, ಸರ್ಕಾರದ ಈ ನಿಲುವನ್ನು ಕೋರ್ಟ್‌ ಒಪ್ಪಿಲ್ಲ.

ಕಾಯ್ದೆಗೆ ತಡೆ ನೀಡುವುದನ್ನು ವಿರೋಧಿಸುವುದಾಗಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು. ಎಲ್ಲ ಪ್ರಕರಣಗಳಲ್ಲಿ ಅಪರಾಧದ ತೀವ್ರತೆ ಯಾವ ಪ್ರಮಾಣದಲ್ಲಿದೆ ಎಂಬುದು ಸರ್ಕಾರಕ್ಕೆ ತಿಳಿದಿಲ್ಲ. ಭಯೋತ್ಪಾದನೆ ಅಥವಾ ಹಣ ಅಕ್ರಮ ವರ್ಗಾವಣೆಯ ಆಯಾಮಗಳೂ ಕೆಲವು ಪ್ರಕರಣಗಳಲ್ಲಿ ಇರಬಹುದು. ಹಾಗಾಗಿ, ಜಾಮೀನು ಅರ್ಜಿಗಳ ವಿಚಾರಣೆಯನ್ನು ತ್ವರಿತಗೊಳಿಸಬಹುದು ಎಂದು ಅವರು ವಿವರಿಸಿದರು.

ಕೇಂದ್ರವು ತನ್ನ ನಿಲುವನ್ನು ತಿಳಿಸಿದ ಬಳಿಕ, ಪೀಠದಲ್ಲಿದ್ದ ನ್ಯಾಯಮೂರ್ತಿಗಳು ಕೊಠಡಿಗೆ ತೆರಳಿ ಸ್ವಲ್ಪ ಹೊತ್ತು ಚರ್ಚಿಸಿದರು. ಬಳಿಕ ಬಂದು, ಈ ವಿಚಾರದ ಬಗ್ಗೆ ವಿಸ್ತೃತವಾದ ಚರ್ಚೆ ನಡೆಸಲಾಗಿದೆ ಎಂದು ಹೇಳಿ, ನಿರ್ದೇಶನಗಳನ್ನು ಪ್ರಕಟಿಸಿದರು. ಅರ್ಹ ವೇದಿಕೆಯಿಂದ ಮರುಪರಿಶೀಲನೆ ನಡೆಸಬೇಕು ಎಂಬ ನಿಲುವಿನ ಮೂಲಕ, ಸೆಕ್ಷನ್‌ ಅನ್ನು ಮರುಪರಿಶೀಲಿಸಬೇಕಾಗಿದೆ ಎಂಬ ನಿಲುವನ್ನು ಕೇಂದ್ರವೂ ಹೊಂದಿದೆ ಎಂದು ಪೀಠವು ಹೇಳಿತು.

ಆರೋಪಿಗಳು ನಿರಾಳ

ಸೆಕ್ಷನ್‌ 124ಎ ಅಡಿಯಲ್ಲಿ ಆರೋಪಿಗಳಾಗಿರುವವರಿಗೆ ಸುಪ‍್ರೀಂಕೋರ್ಟ್‌ನ ಈ ಮಧ್ಯಂತರ ಆದೇಶವು ನಿರಾಳ ತಂದಿದೆ.

ಈ ಸೆಕ್ಷನ್‌ ಅಡಿಯಲ್ಲಿರುವ ಎಲ್ಲ ಪ್ರಕರಣಗಳು, ಮೇಲ್ಮನವಿಗಳು ಮತ್ತು ವಿಚಾರಣಾ ಪ್ರಕ್ರಿಯೆಯನ್ನು ಅಮಾನತಿನಲ್ಲಿ ಇರಿಸಬೇಕು. ಈ ವ್ಯಕ್ತಿಗಳ ಮೇಲೆ ಬೇರೆ ಸೆಕ್ಷನ್‌ ಅಡಿಯಲ್ಲಿ ದೂರುಗಳಿದ್ದರೆ ಅವುಗಳ ವಿಚಾರಣೆ ನಡೆಸಬಹುದು ಎಂದು ಕೋರ್ಟ್‌ ಹೇಳಿದೆ.

ಸೆಕ್ಷನ್‌ ಅಡಿಯಲ್ಲಿರುವ ಅವಕಾಶಗಳ ದುರ್ಬಳಕೆ ತಡೆಗಾಗಿ ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡುವುದಕ್ಕೆ ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಅನುಮತಿ ಕೊಟ್ಟಿದೆ.

ಅರ್ಜಿದಾರರು ಯಾರು?: ಸಂಪಾದಕರ ಕೂಟ, ಮೇ. ಜ. (ನಿವೃತ್ತ) ಎಸ್‌.ಜಿ. ಒಂಬತ್ಕೆರೆ, ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಮತ್ತು ಪೀಪಲ್ಸ್‌ ಯೂನಿಯನ್‌ ಫಾರ್ ಸಿವಿಲ್‌ ಲಿಬರ್ಟೀಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.