ನವದೆಹಲಿ: ದೇಶದಲ್ಲಿ ಮುಸ್ಲಿಮರ ಮೇಲೆ ಹಲ್ಲೆ ಮತ್ತು ಗುಂಪು ಹಿಂಸಾಚಾರ ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು ಎಂದು ಕೋರಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿದೆ.
ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಹಾಗೂ ಜೆಬಿ ಪರ್ಡಿವಾಲ ಅವರಿದ್ದ ಪೀಠ ಅರ್ಜಿಯ ವಿಚಾರಣೆಗೆ ಒಪ್ಪಿ, ಕೇಂದ್ರ ಸರ್ಕಾರ ಹಾಗೂ ಒಡಿಶಾ, ರಾಜಸ್ಥಾನ, ಮಹಾರಾಷ್ಟ್ರ, ಬಿಹಾರ್, ಮಧ್ಯಪ್ರದೇಶ ಹಾಗೂ ಹರಿಯಾಣ ರಾಜ್ಯಗಳ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿ ಮಾಡಿದೆ.
2018ರ ತೆಹ್ಸಿನ್ ಎಸ್ ಪೂನಾವಾಲ ಪ್ರಕರಣ ತೀರ್ಪಿನ ಬಳಿಕವೂ ದೇಶದಲ್ಲಿ ಮುಸ್ಲಿಮರ ಮೇಲೆ ಗುಂಪು ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಪ್ರಕರಣವನ್ನು ವಿವಿಧ ಹೈಕೋರ್ಟ್‌ಗಳ ಅಧಿಕಾರ ವ್ಯಾಪ್ತಿಗೆ ಒಳಪಡಿಸುವುದು ವ್ಯರ್ಥವಾಗುತ್ತದೆ ಎಂದು ವಾದಿಸಿದರು.
ಒಂದು ವೇಳೆ ಆಯಾ ಹೈಕೋರ್ಟ್‌ಗೆ ಹೋಗಿ ಎಂದು ಅರ್ಜಿದಾರರಿಗೆ ಹೇಳಿದ್ದೇ ಅದಲ್ಲಿ, ಅದರಿಂದ ಯಾವುದೇ ಪ್ರಯೋಜನ ಇಲ್ಲ. ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ. ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಸಿಬಲ್, ಇದೊಂದು ಗಂಭೀರ ಪ್ರಕರಣ ಎಂದು ಪ್ರತಿಪಾದಿಸಿದರು.
ವಕೀಲರಾದ ಸುಮಿತಾ ಹಜಾರಿಕಾ ಹಾಗೂ ರಶ್ಮಿ ಸಿಂಗ್ ಮೂಲಕ ಅರ್ಜಿ ಸಲ್ಲಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ನಡೆದ ಹಲ್ಲೆ ಹಾಗೂ ಗುಂಪು ಹಿಂಸಾಚಾರ ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ.
ಗುಂಪು ಹಿಂಸಾಚಾರದ ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ನೀಡಲು, ಮಧ್ಯಂತರ ಪರಿಹಾರವಾಗಿ ಘಟನೆಯ ನಂತರ ತಕ್ಷಣವೇ ನೀಡಬೇಕಾದ ಪರಿಹಾರದ ಒಟ್ಟು ಮೊತ್ತದ ಒಂದು ಭಾಗವನ್ನು ಸಂತ್ರಸ್ತರಿಗೆ ಅಥವಾ ಅವರ ಕುಟುಂಬಗಳಿಗೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.