ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ, ಕನ್ನಡಿಗ ಮೋಹನ್ ಮಲ್ಲಿಕಾರ್ಜುನಗೌಡ ಶಾಂತನಗೌಡರ್ (61) ಶನಿವಾರ ರಾತ್ರಿ ನಿಧನರಾದರು.
ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಆರೋಗ್ಯ ಕ್ಷೀಣಿಸಿದ್ದರಿಂದ ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಶನಿವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು ಎಂದು ಸುಪ್ರೀಂ ಕೋರ್ಟ್‌ನ ಸಹಾಯಕ ರಿಜಿಸ್ಟ್ರಾರ್ ಗಗನ್ ಸೋನಿ ತಿಳಿಸಿದ್ದಾರೆ.
2016ರಿಂದ ಒಂದು ವರ್ಷ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಶಾಂತನಗೌಡರ್ ಅವರು, 2017ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2023ರ ಮೇ 4ರವರೆಗೆ ಅವರ ಸೇವಾ ಅವಧಿ ಇತ್ತು.
1958ರ ಮೇ 5ರಂದು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಜನಿಸಿದ್ದ ಮೋಹನ್ ಶಾಂತನಗೌಡರ್, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಿಂದ ಕಾನೂನು ಪದವಿ ಪಡೆದಿದ್ದರು.
ಧಾರವಾಡದಲ್ಲಿ ವಕೀಲರಾಗಿ ಹೆಸರು ಮಾಡಿದ್ದ ಮಲ್ಲಿಕಾರ್ಜುನಗೌಡ ಅವರ ಪುತ್ರ ಮೋಹನ್ ಶಾಂತನಗೌಡರ್, 1980ರಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. 2003ರಲ್ಲಿ ರಾಜ್ಯ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರಲ್ಲದೆ, 2004ರಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಆರಂಭಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.