ADVERTISEMENT

ಸುಪ್ರೀಂ ಕೋರ್ಟ್ ನೂತನ ಸಿಜೆಐ ನ್ಯಾ. ಸಂಜೀವ್‌ ಖನ್ನಾ ಅವರ ಮಹತ್ವದ 5 ತೀರ್ಪುಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ನವೆಂಬರ್ 2024, 6:40 IST
Last Updated 11 ನವೆಂಬರ್ 2024, 6:40 IST
<div class="paragraphs"><p>ಸುಪ್ರೀಂ ಕೋರ್ಟ್ ನೂತನ ಸಿಜೆಐ ನ್ಯಾ.&nbsp;ಸಂಜೀವ್‌ ಖನ್ನಾ</p></div>

ಸುಪ್ರೀಂ ಕೋರ್ಟ್ ನೂತನ ಸಿಜೆಐ ನ್ಯಾ. ಸಂಜೀವ್‌ ಖನ್ನಾ

   

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಲಯ ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾ. ಸಂಜೀವ್‌ ಖನ್ನಾ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಈ ಹಿಂದೆ ಸಿಜೆಐ ಆಗಿದ್ದ ನ್ಯಾ. ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠದಲ್ಲಿದ್ದ ನ್ಯಾ. ಖನ್ನಾ, ಮಹತ್ವದ ತೀರ್ಪು ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ADVERTISEMENT
ಅರವಿಂದ್‌ ಕೇಜ್ರಿವಾಲ್‌ ಅವರ ಜಾಮೀನು 

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ, ‘ಈ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸುವ ಅಗತ್ಯವಿದೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ’ ಎಂದು ಉಲ್ಲೇಖಿಸಿ, 2024ರ ಜುಲೈನಲ್ಲಿ ನ್ಯಾ. ಖನ್ನಾ ಅವರು ಮಧ್ಯಂತರ ಜಾಮೀನು ನೀಡಿದ್ದರು.

ಇವಿಎಂ–ವಿವಿ-ಪ್ಯಾಟ್‌ ಪುನರ್‌ ಪರಿಶೀಲನೆ

ಲೋಕಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು 2024ರ ಏಪ್ರಿಲ್‌ನಲ್ಲಿ ನ್ಯಾ. ಖನ್ನಾ ಅವರು ತಿರಸ್ಕರಿಸಿದ್ದರು. ಪೇಪರ್ ಬ್ಯಾಲೆಟ್‌ಗಳನ್ನು ಮತ್ತೆ ಬಳಕೆಗೆ ತರುವುದು ಕಾರ್ಯಸಾಧ್ಯವಾದ ಆಯ್ಕೆಯಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಎಣಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಮತದಾನ ದೃಢೀಕರಣ ಯಂತ್ರ ವಿವಿಪ್ಯಾಟ್ ಅಥವಾ ಬಾರ್‌ಕೋಡ್ ಹೊಂದಿರುವ ಸ್ಲಿಪ್‌ಗಳನ್ನು ಪರಿಚಯಿಸುವಂತೆ ಅವರು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ್ದರು.

ಚುನಾವಣಾ ಬಾಂಡ್‌

2024ರ ಫೆಬ್ರುವರಿಯಲ್ಲಿ, ಐವರು ನ್ಯಾಯಮೂರ್ತಿಗಳಿದ್ದ ಪೀಠದ ಭಾಗವಾಗಿದ್ದ ನ್ಯಾ. ಖನ್ನಾ ಅವರು, ದೇಣಿಗೆ ನೀಡುವವರ ಪಾರದರ್ಶಕತೆ ಮತ್ತು ಭ್ರಷ್ಟ ಪದ್ಧತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ವಿವಾದಾತ್ಮಕ ಚುನಾವಣಾ ಬಾಂಡ್ ಅಸಂವಿಧಾನಿಕ ಎಂದು ಘೋಷಿಸಿ ತೀರ್ಪು ನೀಡಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು

ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ನೀಡಿದ ತೀರ್ಪಿನಲ್ಲೂ ನ್ಯಾ. ಖನ್ನಾ ಅವರಿದ್ದರು. 2023ರಲ್ಲಿ ಈ ತೀರ್ಪು ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವುದರಿಂದ ಭಾರತದ ಒಕ್ಕೂಟ ರಚನೆಯ ತತ್ವಗಳಿಗೆ ಧಕ್ಕೆಯಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

ಆರ್‌ಟಿಐ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ತೀರ್ಪು

‘ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಕಚೇರಿಯೂ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿಯೇ ಬರುತ್ತದೆ, ಆದರೆ ಕೆಲವು ಷರತ್ತುಗಳು ಅನ್ವಯಿಸುತ್ತವೆ’ ಎಂದು 2019ರಲ್ಲಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತ್ತು. ಈ ತೀರ್ಪಿನ ಪೀಠದಲ್ಲಿ ನ್ಯಾ. ಖನ್ನಾ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.