ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಿಕ್ಷುಕರು ಮತ್ತು ಅಲೆಮಾರಿಗಳಿಗೆ ಕೋವಿಡ್ ಲಸಿಕೆ ಮತ್ತು ಪುನರ್ವಸತಿ ಕಲ್ಪಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ಸೂಚಿಸಿದೆ.
ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರ ಪೀಠವು.‘ ಶಿಕ್ಷಣ ಮತ್ತು ಉದ್ಯೋಗದ ಕೊರತೆಯಿಂದಾಗಿ ಕೆಲವರು ಭಿಕ್ಷೆಗಾಗಿ ರಸ್ತೆಗಿಳಿಯುತ್ತಾರೆ .ಇದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ಹಾಗಾಗಿ ಯಾವುದೇ ಭಿಕ್ಷುಕರು ರಸ್ತೆಗೆ ಇಳಿಯದಂತೆ ನಿರ್ಬಂಧಿಸಿ ಎಂದು ಆದೇಶಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಅಲ್ಲದೆ, ಈ ವಿಷಯದಲ್ಲಿ ಏನು ಮಾಡಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಹೆ ಮಾಡಬಹುದು ಎಂದ ಪೀಠವು, ಈ ಬಗ್ಗೆ ಎರಡು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿದೆ.
ಕೋವಿಡ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಭಿಕ್ಷುಕರು ಮತ್ತು ಅಲೆಮಾರಿಗಳಿಗಾಗಿ ವಸತಿ, ಆಹಾರವನ್ನು ಒದಗಿಸಬೇಕು. ಲಸಿಕೆಯನ್ನು ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.