ADVERTISEMENT

ಅಪ್ರಾಪ್ತ ವಯಸ್ಸಿನಲ್ಲಿ ಅಪರಾಧ ಸರ್ಕಾರಿ ನೌಕರಿಗೆ ಅಡ್ಡಿಯಾಗದು: ಸುಪ್ರೀಂ ಕೋರ್ಟ್‌

ಕೇಂದ್ರ ಸರ್ಕಾರದ ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 18:11 IST
Last Updated 30 ನವೆಂಬರ್ 2019, 18:11 IST
   

ನವದೆಹಲಿ: ಅಪ್ರಾಪ್ತ ವಯಸ್ಸಿನಲ್ಲಿ (18 ವರ್ಷಕ್ಕಿಂತ ಕಡಿಮೆ) ಮಾಡಿದ ಅಪರಾಧಕ್ಕೆ ಶಿಕ್ಷೆಗೆ ಒಳಗಾಗಿದ್ದರೆ ಅಥವಾ ಕ್ರಿಮಿನಲ್‌ ಆರೋಪ ಎದುರಿಸಿದ್ದರೂ ಯಾವುದೇ ವ್ಯಕ್ತಿಗೆ ಸರ್ಕಾರಿ ನೌಕರಿಯನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಕಾಯ್ದೆ–2000 ಮತ್ತು 2015ರ ಅನ್ವಯ ಅಪ್ರಾಪ್ತ ವಯಸ್ಸಿನಲ್ಲಿ ಅಪರಾಧಿಯಾಗಿದ್ದರೂ ಆ ಕಳಂಕವನ್ನು ತೆಗೆದುಹಾಕಬೇಕು. ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾಗುವ ಮಕ್ಕಳನ್ನು ಕಳಂಕ ಇಲ್ಲದ ಸಾಮಾನ್ಯ ವ್ಯಕ್ತಿಯಂತೆ ಸಮಾಜವು ಪರಿಗಣಿಸಬೇಕು ಎನ್ನುವ ಉದ್ದೇಶ ಈ ಕಾಯ್ದೆ ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌ ಮತ್ತು ವಿನೀತ್‌ ಶರಣ್‌ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದೆ.

ADVERTISEMENT

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ವ್ಯಕ್ತಿ ಯೊಬ್ಬರ ನೇಮಕವನ್ನು ಪರಿಗಣಿಸು ವಂತೆ ರಾಜಸ್ಥಾನ ಹೈಕೋರ್ಟ್‌ ನೀಡಿದ್ದ ನಿರ್ದೇಶನ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ವ್ಯಕ್ತಿಯು ಬಾಲಕನಾಗಿದ್ದಾಗ ಬಾಲಕಿಗೆ ಚುಡಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಬಾಲಕಿ ಮತ್ತು ಅವರ ಕುಟುಂಬದವರು ಈ ಪ್ರಕರಣವನ್ನು ಮುಂದುವರಿಸಲು ಬಯಸದ ಕಾರಣ ಆತ ಬಿಡುಗಡೆಯಾಗಿದ್ದ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ಈ ಬಗ್ಗೆ ತೀರ್ಪಿನಲ್ಲಿ ವಿವರಿಸಿರುವ ನ್ಯಾಯಾಲಯ, ವ್ಯಕ್ತಿಯು ಕೃತ್ಯವೆಸಗುವ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದರಿಂದ ಆರೋಪಗಳು ನಿಜವಾಗಿದ್ದರೂ ಆತ ಅಪರಾಧ ಮಾಡಿದ್ದಾನೆ ಎಂದು ಹೇಳಲಾಗದು. ಅಭ್ಯರ್ಥಿಯು ತನ್ನ ಮೇಲಿದ್ದ ಆರೋಪಗಳು ಮತ್ತು ಬಿಡುಗಡೆಯನ್ನು ಪ್ರಾಮಾಣಿಕವಾಗಿ ಬಹಿರಂಗಪಡಿಸಿದ್ದಾನೆ. ಹೀಗಾಗಿ, ಆತ ಯಾವುದೇ ಸತ್ಯ ಸಂಗತಿಗಳನ್ನು ಮುಚ್ಚಿಡಲು
ಪ್ರಯತ್ನಿಸಿಲ್ಲ. ಹೀಗಾಗಿ, ನಿಗದಿಪಡಿಸಿರುವ ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಆಯ್ಕೆಯಾಗಿರುವ ವ್ಯಕ್ತಿಗೆ ಉದ್ಯೋಗ ನಿರಾಕರಿಸುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.