ನವದೆಹಲಿ: 2017ರಲ್ಲಿ ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ನೇಮಕಾತಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಕ್ಕಾಗಿ ₹5 ಲಕ್ಷ ವಸೂಲಿ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದು ‘ಪ್ರಚೋದಿತ’ ಅರ್ಜಿ ಎಂದು ನ್ಯಾಯಾಲಯ ಹೇಳಿದೆ. 2017ರಲ್ಲಿ ದೀಪಕ್ ಮಿಶ್ರಾ ಅವರು ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ಮುಖ್ಯ ನ್ಯಾಯಮೂರ್ತಿ ಅವರು ತಮ್ಮ ಉತ್ತರಾಧಿಕಾರಿಯ ಹೆಸರನ್ನು ರಾಷ್ಟ್ರಪತಿಗೆ ಶಿಫಾರಸು ಮಾಡುವ ಪದ್ಧತಿಯನ್ನು ಸ್ವಾಮಿ ಓಂ (ಈಗ ನಿಧನರಾಗಿದ್ದಾರೆ) ಮತ್ತು ಮುಕೇಶ್ ಜೈನ್ ಪ್ರಶ್ನಿಸಿದ್ದರು.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರನ್ನೊಳಗೊಂಡ ಪೀಠವು ಈ ನಿರ್ದೇಶನ ನೀಡಿದೆ. ಜೈನ್ ಅವರಿಂದ ಹಣ ವಸೂಲಿ ಮಾಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜೈನ್ ಒಡಿಶಾದ ಬಾಲಸೋರ್ ಜೈಲಿನಲ್ಲಿದ್ದಾರೆ.
₹5 ಲಕ್ಷ ವೆಚ್ಚದ ಮೊತ್ತವಾಗಿದ್ದು, ವಸೂಲಿ ಮಾಡುವವರೆಗೂ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಮೊತ್ತವನ್ನು ಕಡಿಮೆ ಮಾಡುವಂತೆ ಜೈನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು. 2017ರಲ್ಲೇ ₹10 ಲಕ್ಷ ವಸೂಲಿ ಮಾಡುವಂತೆ ಸೂಚಿಸಲಾಗಿತ್ತು. ನಂತರ, ಈ ಮೊತ್ತವನ್ನು ಕಳೆದ ವರ್ಷ ₹5ಲಕ್ಷಕ್ಕೆ ಇಳಿಸಲಾಗಿತ್ತು ಎಂದು ನ್ಯಾಯಾಲಯ ಹೇಳಿತು.
ಜೈನ್ ಅವರಿಗೆ ಯಾವುದೇ ಜಮೀನು ಇಲ್ಲ ಎಂದು ಜೈನ್ ಪರ ವಕೀಲ ಎ.ಪಿ. ಸಿಂಗ್ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ಜೈನ್ ಆವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.
ಸ್ವಾಮಿ ಓಂ ಅವರು ಕೋವಿಡ್–19 ಮೊದಲ ಅಲೆಯ ಸಂದರ್ಭದಲ್ಲಿ ನಿಧನರಾಗಿದ್ದಾರೆ. ಜೈನ್ ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.