ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (ಪಿಸಿಎ) ತಮಿಳುನಾಡು ಮಾಡಿರುವ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಗುರುವಾರ ಎತ್ತಿಹಿಡಿದಿದೆ. ಈ ಮೂಲಕ ಜನಪ್ರಿಯ ಕ್ರೀಡೆ ‘ಜಲ್ಲಿಕಟ್ಟು’ಗೆ ಅನುಮತಿ ನೀಡಿದೆ. ಇದರ ಜೊತೆಗೆ ಮಹಾರಾಷ್ಟ್ರದ ಎತ್ತಿನ ಗಾಡಿ ಓಟವನ್ನೂ ನ್ಯಾಯಾಲಯ ಸಮ್ಮತಿಸಿದೆ.
ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರಾಣಿಯ ನೋವು, ಯಾತನೆಯನ್ನು ಕಡಿಮೆ ಮಾಡಲು ಕಾನೂನಿನಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರ ಸಂವಿಧಾನ ಪೀಠವು ಅಭಿಪ್ರಾಯಪಟ್ಟಿತು.
ತಮಿಳುನಾಡಿನ ಜಲ್ಲಿಕಟ್ಟು, ಮಹಾರಾಷ್ಟ್ರದ ಎತ್ತಿನ ಗಾಡಿ ಓಟಕ್ಕೆ ಅವಕಾಶ ನೀಡುವ ‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಿದ್ದುಪಡಿ) ಕಾಯ್ದೆ, 2017ರ ಸಿಂಧುತ್ವವನ್ನು ಪ್ರಶ್ನಿಸುವ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸುಗ್ಗಿಯ ಹಬ್ಬ ‘ಪೊಂಗಲ್’ ಅಂಗವಾಗಿ ತಮಿಳುನಾಡಿನ ಹಲವು ಭಾಗಗಳಲ್ಲಿ ಜಲ್ಲಿಕಟ್ಟು ಕ್ರೀಡೆ ಏರ್ಪಡಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.