ADVERTISEMENT

LMV ಲೈಸೆನ್ಸ್ ಇರುವವರಿಗೆ 7,500 ಕೆ.ಜಿ ತೂಕವಿರುವ ವಾಹನ ಓಡಿಸಲು ಕೋರ್ಟ್ ಅನುಮತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 6:14 IST
Last Updated 6 ನವೆಂಬರ್ 2024, 6:14 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಲಘು ಮೋಟಾರು ವಾಹನ (ಎಲ್‌ಎಂವಿ) ಚಾಲನಾ ಪರವಾನಗಿ ಹೊಂದಿರುವವರು 7,500 ಕೆ.ಜಿ ತೂಕ ಮೀರದ ಸಾರಿಗೆ ವಾಹನಗಳನ್ನು ಚಾಲನೆ ಮಾಡಲು ಅರ್ಹರಾಗಿದ್ಧಾರೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರು ಇದ್ದ ಸಂವಿಧಾನ ಪೀಠ ನೀಡಿರುವ ಈ ಸರ್ವಾನುಮತದ ತೀರ್ಪಿನಿಂದ ವಾಣಿಜ್ಯಿಕ ವಾಹನಗಳ ಚಾಲಕರಿಗೆ ಪ್ರಯೋಜನವಾಗಲಿದೆ.

ADVERTISEMENT

ಈ ತೀರ್ಪಿನಿಂದ ಚಾಲನಾ ಪರವಾನಗಿಗೆ ಸಂಬಂಧಿಸಿದ ನಿಯಮಾವಳಿಗಳ ಕುರಿತು ಸ್ಪಷ್ಟತೆ ಲಭಿಸಿದಂತಾಗಿದೆ. ಅಲ್ಲದೇ, ಅಪಘಾತ ಪ್ರಕರಣಗಳಲ್ಲಿ, ಚಾಲಕರು ಹೊಂದಿರುವ ಪರವಾನಗಿಯ ಮಾದರಿಯನ್ನು ಆಧಾರವನ್ನಾಗಿಟ್ಟುಕೊಂಡು ವಿಮಾ ಕಂಪನಿಗಳು ಕ್ಲೇಮುಗಳನ್ನು ತಿರಸ್ಕರಿಸುವುದನ್ನು ಕೂಡ ಈ ತೀರ್ಪು ತಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಪೀಠದ ಪರವಾಗಿ 126 ಪುಟಗಳ ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಹೃಷಿಕೇಶ್‌ ರಾಯ್‌, ‘ಅಪಾಯಕಾರಿ ಸರಕುಗಳನ್ನು ಸಾಗಿಸುವ ವಾಹನಗಳ ಚಾಲನೆಗೆ ನಿಗದಿಪಡಿಸಿರುವ ವಿಶೇಷ ಅರ್ಹತೆಗೆ ಸಂಬಂಧಿಸಿದ ನಿಯಮಗಳು ಮುಂದುವರಿಯಲಿವೆ’ ಎಂದು ಹೇಳಿದರು.

ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ, ಪಂಕಜ್‌ ಮಿತ್ತಲ್‌ ಹಾಗೂ ಮನೋಜ್‌ ಮಿಶ್ರಾ ಅವರೂ ಈ ಪೀಠದಲ್ಲಿದ್ದಾರೆ.

ಪೀಠವು, ಮುಕುಂದ ದೇವಾಂಗನ್‌ ವರ್ಸಸ್ ಓರಿಯಂಟಲ್‌ ಇನ್ಶುರನ್ಸ್ ಕಂಪನಿ ಲಿಮಿಟೆಡ್  ಪ್ರಕರಣದಲ್ಲಿ 2017ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಎಲ್‌ಎಂವಿ ಚಾಲನಾ ಪರವಾನಗಿ ಹೊಂದಿರುವವರು 7,500 ಕೆ.ಜಿ ವರೆಗೆ ತೂಕ ಹೊಂದಿರುವ ಸಾರಿಗೆ ವಾಹನಗಳನ್ನು ಚಲಾಯಿಸಬಹುದು ಎಂದು ಆಗ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ರಸ್ತೆ ಸುರಕ್ಷತೆ ಎಂಬುದು ಜಾಗತಿಕವಾಗಿಯೂ ಪ್ರಮುಖ ಸಾರ್ವಜನಿಕ ವಿಷಯ. ಭಾರತದಲ್ಲಿ ರಸ್ತೆ ಅಪಘಾತಗಳಲ್ಲಿ ಲಕ್ಷಾಂತರ ಜನರು ಸಾವಿಗೀಡಾಗುತ್ತಿರುವುದು  ಕಳವಳಕಾರಿ ಸಂಗತಿ. ಎಲ್‌ಎಂವಿ ಚಾಲನಾ ಪರವಾನಗಿ ಹೊಂದಿರುವ ಚಾಲಕರು ಸಾರಿಗೆ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬುದು ಆಧಾರರಹಿತ ವಾದ’ ಎಂದು ಪೀಠ ಹೇಳಿದೆ.

ಎಲ್‌ಎಂವಿ ಚಾಲನಾ ಪರವಾನಗಿ ಹೊಂದಿರುವ ಚಾಲಕರು ಸಾರಿಗೆ ವಾಹನಗಳನ್ನು ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂಬುದನ್ನು ಪುಷ್ಟೀಕರಿಸುವಂತಹ ದತ್ತಾಂಶಗಳನ್ನು ಯಾವ ಕಕ್ಷಿದಾರರೂ ಸಲ್ಲಿಸಿಲ್ಲ ಎಂದಿದೆ.

ಈ ವಿಚಾರವಾಗಿ, ಬಜಾಜ್‌ ಅಲಿಯಾಂಜ್‌ ಜನರಲ್‌ ಇನ್ಶುರನ್ಸ್‌ ಕಂಪನಿ ಲಿಮಿಟೆಡ್ ಹಾಗೂ ಇತರರು ಸಲ್ಲಿಸಿದ್ದ 76 ಅರ್ಜಿಗಳ ವಿಚಾರಣೆಯನ್ನು ಪೀಠವು ಕಳೆದ ವರ್ಷ ಜುಲೈ 18ರಂದು ಆರಂಭಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಪೀಠ, ಆಗಸ್ಟ್‌ 21ರಂದು ತೀರ್ಪು ಕಾಯ್ದಿರಿಸಿತ್ತು.

ತೀರ್ಪಿನ ಪ್ರಮುಖಾಂಶಗಳು

  • ಎಲ್‌ಎಂವಿ ಚಾಲನಾ ಪರವಾನಗಿ ಹೊಂದಿರುವ ಚಾಲಕ ಒಟ್ಟು 7500 ಕೆ.ಜಿ ತೂಕವಿರುವ ಸಾಗಣೆ ವಾಹನ ಚಾಲನೆ ಮಾಡಲು ಅರ್ಹತೆ ಹೊಂದಿರುತ್ತಾರೆ. ಇದಕ್ಕಾಗಿ ಮೋಟಾರು ವಾಹನ ಕಾಯ್ದೆಯಡಿ ಹೆಚ್ಚುವರಿ ದೃಢೀಕರಣದ ಅಗತ್ಯ ಇರುವುದಿಲ್ಲ

  • ಚಾಲನಾ ಪರವಾನಗಿ ನೀಡುವ ಉದ್ದೇಶಕ್ಕೆ ಸಂಬಂಧಿಸಿ ಎಲ್‌ಎಂವಿಗಳು ಹಾಗೂ ಸಾರಿಗೆ ವಾಹನಗಳು ಸಂಪೂರ್ಣವಾಗಿ ಪ್ರತ್ಯೇಕ ವರ್ಗಗಳಿಗೆ ಸೇರಿದವುಗಳಲ್ಲ

  • ಇ–ಕಾರ್ಟ್‌ಗಳು ಇ–ರಿಕ್ಷಾಗಳು ಹಾಗೂ ಅಪಾಯಕಾರಿ ವಸ್ತುಗಳನ್ನು ಸಾಗಣಟೆ ಮಾಡುವ ವಾಹನಗಳ ಚಾಲನಾ ಪರವಾನಗಿಗೆ ಸಂಬಂಧಿಸಿ ವಿಶೇಷ ಅರ್ಹತೆ ಕುರಿತ ನಿಯಮಗಳು ಅನ್ವಯವಾಗಲಿವೆ

  • ರಸ್ತೆ ಅಪಘಾತಗಳ ಸಂಭವಿಸುವುದಕ್ಕೆ ಅನೇಕ ಕಾರಣಗಳಿವೆ. ಅಜಾಗರೂಕತೆಯಿಂದ ಚಾಲನೆ ವೇಗದ ಚಾಲನೆ ರಸ್ತೆಗಳ ವಿನ್ಯಾಸ ನಿಯಮಗಳನ್ನು ಪಾಲನೆ ಮಾಡದಿರುವುದು ಪ್ರಮುಖ ಕಾರಣಗಳು

  • ವಾಹನ ಚಾಲನೆ ವೇಳೆ ಮೊಬೈಲ್ ಫೋನ್‌ ಬಳಸುವುದು ಸೀಟ್‌ ಬೆಲ್ಟ್‌ ಹಾಕಿಕೊಳ್ಳದೇ ಇರುವುದು ಹೆಲ್ಮೆಟ್‌ ಧರಿಸದೇ ಇರುವುದು ಕೂಡ ಅಪಘಾತ ಸಂಭವಿಸಲು ಕಾರಣಗಳಾಗಿವೆ

  • 7500 ಕೆ.ಜಿಗಿಂತಲೂ ಕಡಿಮೆ ತೂಕವಿರುವ ಹಾಗೂ ವಿಮೆ ಸಾರಿಗೆ ವಾಹನವು ಅಪಘಾತಕ್ಕೆ ಒಳಗಾದ ಸಂದರ್ಭದಲ್ಲಿ ಚಾಲಕನು ಹೊಂದಿರುವ ಪರವಾನಗಿ ಕಾರಣ ಒಡ್ಡಿ ನ್ಯಾಯಯುತವಾಗಿ ಸಿಗಬೇಕಾದ ವಿಮಾಪರಿಹಾರವನ್ನು ನೀಡದಿರುವ ವಿಮಾ ಕಂಪನಿಗಳ ಧೋರಣೆಗೆ ಈ ತೀರ್ಪು ಅಂತ್ಯ ಹಾಡಲಿದೆ

  • ಮೋಟಾರು ವಾಹನಗಳ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳು ಇಂತಹ ಎಲ್ಲ ವಿಚಾರಗಳನ್ನು ಒಳಗೊಂಡಿರಲಿಕ್ಕಿಲ್ಲ. ಆದರೆ ಇಂತಹ ನ್ಯೂನತೆಗಳನ್ನು ಸರಿಪಡಿಸುವ ಕ್ರಮಗಳನ್ನು ಉದ್ದೇಶಿತ ತಿದ್ದುಪಡಿಗಳು ಒಳಗೊಂಡಿರುತ್ತವೆ ಎಂದು ಆಶಿಸುತ್ತೇವೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.