ನವದೆಹಲಿ: ನ್ಯಾಯಾಲಯದ ಪ್ರಕ್ರಿಯೆಯ ವರದಿಗಾರಿಕೆಗೆ ತಡೆ ಒಡ್ಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಸ್ಪಷ್ಟವಾಗಿ ಹೇಳಿದೆ. ನ್ಯಾಯಾಂಗ ಪ್ರಕ್ರಿಯೆಯ ವರದಿಗಾರಿಕೆಯು ಪತ್ರಿಕಾ ಸ್ವಾತಂತ್ರ್ಯ ಮತ್ತು ಮುಕ್ತ ನ್ಯಾಯಾಲಯ ತತ್ವಗಳ ಮುಂದುವರಿಕೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ.
‘ನ್ಯಾಯಾಲಯದ ಪ್ರಕ್ರಿಯೆಗಳನ್ನು ವರದಿ ಮಾಡುವ ವಿಚಾರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕನಾಗಿ ಈ ನ್ಯಾಯಾಲಯವು ನಿಲ್ಲುತ್ತದೆ. ಇದು ವಾಕ್ ಸ್ವಾತಂತ್ರ್ಯ ಮತ್ತು ಮಾತನಾಡುವ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ, ಕೇಳಲು ಮತ್ತು ಕೇಳಿಸಿಕೊಳ್ಳಲು ಬಯಸುವವರ ಸ್ವಾತಂತ್ರ್ಯದ ಅವಿಭಾಜ್ಯ ಅಂಗ. ಎಲ್ಲಕ್ಕಿಂತ ಮುಖ್ಯವಾಗಿ ಇದು ನ್ಯಾಯಾಂಗವನ್ನು ಉತ್ತರದಾಯಿಯಾಗಿಸುತ್ತದೆ’ ಎಂದು ಪೀಠವು ಹೇಳಿದೆ.
ಕೋವಿಡ್–19ರ ಎರಡನೇ ಅಲೆ ವ್ಯಾಪಕವಾಗಿ ಹರಡಲು ಚುನಾವಣಾ ಆಯೋಗವೇ ಕಾರಣ ಎಂದು ವಿಚಾರಣೆ ವೇಳೆ ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದರೆ, ಈ ಅಭಿಪ್ರಾಯವು ಅಂತಿಮ ಆದೇಶದಲ್ಲಿ ಇರಲಿಲ್ಲ. ಹಾಗಾಗಿ ಅಂತಿಮ ಆದೇಶದ ಭಾಗವಾಗದ ವಿಚಾರಗಳನ್ನು ಮಾಧ್ಯಮವು ವರದಿ ಮಾಡಬಾರದು ಎಂದು ಕೋರಿ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ.
ನ್ಯಾಯಾಲಯದ ಅಧಿಕೃತ ಅಭಿಪ್ರಾಯವು ತೀರ್ಪು ಮತ್ತು ಆದೇಶಗಳಲ್ಲಿ ಇರುತ್ತದೆಯೇ ವಿನಾ ವಿಚಾರಣೆ ಸಂದರ್ಭದಲ್ಲಿ ವ್ಯಕ್ತವಾಗುವ ಮೌಖಿಕ ಅಭಿಪ್ರಾಯಗಳಲ್ಲಿ ಅಲ್ಲ ಎಂದೂ ಪೀಠವು ಹೇಳಿದೆ.
ಕೋವಿಡ್ ಹರಡಲು ನೆರವಾದ ಕಾರಣಕ್ಕೆ ಚುನಾವಣಾ ಆಯೋಗದ ಮೇಲೆ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿರುವುದು ವರ್ಷಗಳಿಂದ ರೂಪುಗೊಂಡ ವರ್ಚಸ್ಸಿಗೆ ಹಾನಿ ಮಾಡಿದೆ ಎಂಬುದು ಆಯೋಗದ ತಕರಾರು ಆಗಿತ್ತು.
ತಂತ್ರಜ್ಞಾನದ ಮುನ್ನಡೆಯಿಂದಾಗಿ ನ್ಯಾಯಾಲಯದ ಪ್ರಕ್ರಿಯೆಗಳು ಸಾಮಾಜಿಕ ಜಾಲ ತಾಣಗಳು ಮತ್ತು ಇತರ ವೇದಿಕೆಗಳಲ್ಲಿ ನೇರವಾಗಿಯೇ ಪ್ರಸಾರ ಆಗುತ್ತಿವೆ. ಇದು ಕಳವಳಕ್ಕೆ ಕಾರಣವಲ್ಲ, ಬದಲಿಗೆ, ನಮ್ಮ ಸಂವಿಧಾನದ ವೈಶಿಷ್ಟ್ಯ ಎಂದು ಸಂಭ್ರಮಿಸಬೇಕಾದ ವಿಚಾರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ನ್ಯಾಯಾಲಯದ ಪ್ರಕ್ರಿಯೆಯ ವರದಿಗಾರಿಕೆಗೂ ಅನ್ವಯವಾಗುತ್ತದೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಪೌರರಿಗೆ ಇದೆ’ ಎಂದು ಪೀಠ ಹೇಳಿದೆ.
ಅಮೆರಿಕ ಮತ್ತು ಬ್ರಿಟನ್‌ನ ಸುಪ್ರೀಂ ಕೋರ್ಟ್, ಮೇಲ್ಮನವಿ ನ್ಯಾಯಾಲಯ ಮುಂತಾದೆಡೆ ನ್ಯಾಯಾಲಯಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ನ್ಯಾಯದಾನ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಭಾಗ ವಹಿಸುವಿಕೆ ಇರಬೇಕು ಎಂಬ ಕಾರಣಕ್ಕೆ ಗುಜರಾತ್ ಹೈಕೋರ್ಟ್ ಕೂಡ ಪ್ರಕ್ರಿಯೆಯ ನೇರ ಪ್ರಸಾರ ನಡೆಸುತ್ತಿದೆ ಎಂಬುದನ್ನು ಪೀಠವು ಉಲ್ಲೇಖಿಸಿತು.
‘ಹೈಕೋರ್ಟ್ ಅಭಿಪ್ರಾಯ ಕಠಿಣ, ಅಸಮರ್ಪಕ’
ಮದ್ರಾಸ್ ಹೈಕೋರ್ಟ್‌ನ ಮೌಖಿಕ ಅಭಿಪ್ರಾಯಗಳು ‘ಕಠಿಣ’ವಾಗಿದ್ದವು, ‘ಅಸಮರ್ಪಕ’ವಾಗಿದ್ದವು ಎಂದು ಪೀಠವು ಹೇಳಿದೆ. ಸ್ವಲ್ಪ ಎಚ್ಚರ ವಹಿಸಿದ್ದರೆ, ವಿವೇಚನೆ ತೋರಿದ್ದರೆ ಆಯೋಗವು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಹಾಕುವ ಸ್ಥಿತಿ ಉಂಟಾಗುತ್ತಿರಲಿಲ್ಲ ಎಂದಿದೆ.
‘ವಿಚಾರಣೆ ಸಂದರ್ಭದಲ್ಲಿ ಮತ್ತು ತೀರ್ಪುಗಳಲ್ಲಿ ಬಳಕೆಯಾಗುವ ಭಾಷೆಯು ನ್ಯಾಯಾಂಗೀಯ ಔಚಿತ್ಯಕ್ಕೆ ಅನುಗುಣವಾಗಿರಬೇಕು. ನ್ಯಾಯಾಂಗ ಪ್ರಕ್ರಿಯೆಯಲ್ಲಿ ಭಾಷೆಯು ಬಹಳ ಮುಖ್ಯವಾದ ಸಾಧನವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಮೌಖಿಕ ಅಭಿಪ್ರಾಯವು ಚುನಾವಣಾ ಆಯೋಗಕ್ಕೆ ಶಿಕ್ಷೆ ವಿಧಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದೂ ಪೀಠ ಹೇಳಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಹೈಕೋರ್ಟ್‌ಗಳು ನಿರ್ವಹಿಸಿದ ಪಾತ್ರವನ್ನು ಪೀಠವು ಶ್ಲಾಘಿಸಿದೆ. ಆದರೆ, ಸಂದರ್ಭಕ್ಕೆ ಅನುಸಾರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಅವು ತಪ್ಪು ವ್ಯಾಖ್ಯಾನಕ್ಕೆ ಒಳಗಾಗಬಾರದು ಎಂಬ ಎಚ್ಚರವು ನ್ಯಾಯಮೂರ್ತಿಗಳಲ್ಲಿ ಇರಬೇಕು ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.