ADVERTISEMENT

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನ್ಯಾ.ಅರುಣ್‌ ಕುಮಾರ್ ಮಿಶ್ರಾ ಅಧ್ಯಕ್ಷ

ಏಜೆನ್ಸೀಸ್
Published 2 ಜೂನ್ 2021, 8:15 IST
Last Updated 2 ಜೂನ್ 2021, 8:15 IST
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣ್‌ ಕುಮಾರ್ ಮಿಶ್ರಾ
ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣ್‌ ಕುಮಾರ್ ಮಿಶ್ರಾ   

ನವದೆಹಲಿ: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣ್‌ ಕುಮಾರ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ಬುಧವಾರ ಅಧಿಕಾರ ವಹಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್‌, ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಸಮಿತಿಯು ನ್ಯಾಯಮೂರ್ತಿ ಅರುಣ್‌ ಕುಮಾರ್‌ ಮಿಶ್ರಾ ಅವರ ಹೆಸರನ್ನು ಶಿಫಾರಸು ಮಾಡಿತ್ತು.

ಕೇಂದ್ರದ ನಿಯೋಜನೆಗಳ ಸಮಿತಿಯು ಮಿಶ್ರಾ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಮುನ್ನಡೆಸಲು ಶಿಫಾರಸು ಮಾಡಿತು.

ADVERTISEMENT

ಮಿಶ್ರಾ ಅವರ ಹಿನ್ನೆಲೆ:

ಅರುಣ್‌ ಕುಮಾರ್ ಮಿಶ್ರಾ ಅವರು 1978ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡರು. 1998–99ರಲ್ಲಿ ಭಾರತದ ಬಾರ್‌ ಕೌನ್ಸಿಲ್‌ಗೆ ಆಯ್ಕೆಯಾದ ಅತಿ ಕಿರಿಯ ಎಂಬ ಹೆಗ್ಗಳಿಕೆ ಮಿಶ್ರಾ ಅವರದು.

1999ರ ಅಕ್ಟೋಬರ್‌ನಲ್ಲಿ ಮಿಶ್ರಾ ಅವರು ಮಧ್ಯ ಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ ರಾಜಸ್ಥಾನ ಹೈಕೋರ್ಟ್‌ ಮತ್ತು ಕಲ್ಕತ್ತ ಹೈಕೋರ್ಟ್‌ಗಳಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. 2014ರ ಜುಲೈ 7ರಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡು 2020ರ ಸೆಪ್ಟೆಂಬರ್‌ 3ರವರೆಗೂ ಕರ್ತವ್ಯ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.