ನವದೆಹಲಿ: ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳು ನಗರಗಳಲ್ಲಿ ನೆಲೆಸಿರುವ ಒಂದು ವರ್ಗದ ಜನರ ಮನಃಸ್ಥಿತಿಯಾಗಿದೆ. ಮದುವೆಗೆ ಮಾನ್ಯತೆ ನೀಡುವುದು ಶಾಸಕಾಂಗದ ಕೆಲಸ. ಹಾಗಾಗಿ, ಇಂತಹ ವಿಚಾರಗಳಲ್ಲಿ ತೀರ್ಪು ನೀಡುವುದರಿಂದ ನ್ಯಾಯಾಲಯವು ಹಿಂದಕ್ಕೆ ಸರಿಯಬೇಕು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ.
ಈ ಅರ್ಜಿಗಳು ವಿಚಾರಣೆಗೇ ಅರ್ಹವಲ್ಲ. ಸಾಮಾಜಿಕ ಸ್ವೀಕೃತಿಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಕೇಂದ್ರವು ವಾದಿಸಿದೆ.
‘ಗ್ರಾಮೀಣ, ಅರೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ನಿಲುವುಗಳು, ಧಾರ್ಮಿಕ ನಿಲುವುಗಳು, ವೈಯಕ್ತಿಕ ಕಾನೂನುಗಳು, ಮದುವೆಗೆ ಸಂಬಂಧಿಸಿದ ಪದ್ಧತಿಗಳು, ಇತರ ಕಾನೂನುಗಳ ಮೇಲೆ ಈ ಕಾನೂನು (ಸಲಿಂಗ ಮದುವೆ ಮಾನ್ಯತೆ) ಬೀರಬಹುದಾದ ಪರಿಣಾಮಗಳ ಕುರಿತು ಶಾಸಕಾಂಗವು ವಿಸ್ತಾರ ನೆಲೆಯಲ್ಲಿ ಚಿಂತಿಸಿ, ಕ್ರಮ ಕೈಗೊಳ್ಳಲಿದೆ’ ಎಂದು ಕೇಂದ್ರ ಹೇಳಿದೆ.
ಸರ್ಕಾರವು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಇದನ್ನು ವಿವರಿಸಲಾಗಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ವಿಚಾರಣೆಯು ಮಂಗಳವಾರವೂ ಮುಂದುವರಿಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.