ADVERTISEMENT

ಮಸೂದೆಗೆ ಸಹಿ ಹಾಕಲು ನಕಾರ: ಕೇರಳ, ಬಂಗಾಳ ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ನೋಟಿಸ್

ಪಿಟಿಐ
Published 26 ಜುಲೈ 2024, 6:52 IST
Last Updated 26 ಜುಲೈ 2024, 6:52 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವಿಧಾನಸಭೆಗಳಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ಅನುಮೋದನೆ ನಿರಾಕರಿಸಿರುವ ಪ್ರಕರಣಗಳಲ್ಲಿ ಎನ್‌ಡಿಎಯೇತರ ಪಕ್ಷಗಳ ಆಡಳಿತವಿರುವ ಕೇರಳ, ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಸಮ್ಮತಿಸಿದೆ.

ಕೇರಳದ ರಾಜ್ಯಪಾಲ ಆರೀಫ್ ಮೊಹಮ್ಮದ್‌ ಖಾನ್‌ ಅವರು ಕೆಲ ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಒಪ್ಪಿಸಿದ್ದಾರೆ. ಅವು ಇನ್ನೂ ಇತ್ಯರ್ಥವಾಗಬೇಕಿದೆ ಎಂದು ಕೇರಳ ಸರ್ಕಾರ ಹೇಳಿದೆ.

ಈ ಕುರಿತ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಗೃಹ ಸಚಿವಾಲಯ, ಕೇರಳ ಹಾಗೂ ಪಶ್ಚಿಮ ಬಂಗಾಳದ ರಾಜ್ಯಪಾಲರ ಕಾರ್ಯದರ್ಶಿಯವರಿಗೆ ನೋಟಿಸ್‌ ಅನ್ನು ಜಾರಿ ಮಾಡಿದ್ದು, ಮೂರು ವಾರಗಳಲ್ಲಿ ಉತ್ತರಿಸಬೇಕು ಎಂದು ಸೂಚಿಸಿದೆ.

ADVERTISEMENT

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್‌ ಮಿಶ್ರಾ ಅವರಿದ್ದ ಪೀಠವು, ಇದೇ ವೇಳೆ ಪ್ರಕರಣದ ಸಂಬಂಧ ಗೃಹ ಸಚಿವಾಲಯವನ್ನೂ ಪ್ರತಿವಾದಿಯಾಗಿ ಉಲ್ಲೇಖಿಸಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಿತು.

‘ಅನುಮೋದನೆ ಕೋರಿದ್ದ ಎಂಟು ಮಸೂದೆಗಳನ್ನು ರಾಜ್ಯಪಾಲರು ತಡೆಹಿಡಿದಿದ್ದಾರೆ’ ಎಂದು ಪಶ್ಚಿಮ ಬಂಗಾಳ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಿದೆ.

ಕೇರಳ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ.ಕೆ.ವೇಣುಗೋಪಾಲ್ ಅವರು, ‘ಇದು, ಅತಿ ದುರದೃಷ್ಟಕರವಾದ ಪರಿಸ್ಥಿತಿ’ ಎಂದು ಪೀಠದ ಗಮನಕ್ಕೆ ತಂದರು. ಎರಡೂ ಪ್ರಕರಣಗಳಲ್ಲಿ ಆಯಾ ರಾಜ್ಯಪಾಲರ ಕಾರ್ಯದರ್ಶಿಯವರಿಗೆ ನೋಟಿಸ್‌ ನೀಡುತ್ತಿದ್ದೇವೆ ಎಂದು ಪೀಠ ಇದಕ್ಕೆ ಪ್ರತಿಕ್ರಿಯಿಸಿತು.

‘ಮಸೂದೆಗಳು ಎಂಟು ತಿಂಗಳಿಂದ ಬಾಕಿ ಉಳಿದಿವೆ. ರಾಷ್ಟ್ರಪತಿಗಳ ಪರಿಶೀಲನೆಗೆ ಒಪ್ಪಿಸುವುದನ್ನೂ ನಾನು ಪ್ರಶ್ನಿಸುತ್ತೇನೆ. ಇಂತಹ ಗೊಂದಲ ರಾಜ್ಯಪಾಲರುಗಳಲ್ಲಿ ಉಳಿದಿದೆ. ಮಸೂದೆಗೆ ಅನುಮೋದನೆ ನೀಡದೆ ಬಾಕಿ ಉಳಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾದುದು’ ಎಂದು ವೇಣುಗೋಪಾಲ್ ವಾದಿಸಿದರು.

ಪಶ್ಚಿಮ ಬಂಗಾಳ ಸರ್ಕಾರವನ್ನು ಹಿರಿಯ ವಕೀಲ ಪ್ರತಿನಿಧಿಸಿದ್ದ ಅಭಿಷೇಕ್ ಸಿಂಘ್ವಿ ಅವರು, ನಾನು ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಹೆಸರಿಸಲಿದ್ದು, ಪ್ರಕರಣ ಇತ್ಯರ್ಥಪಡಿಸಲು ಕೋರ್ಟ್‌ಗೆ ಸಹಕರಿಸಬೇಕು ಎಂದು ಲಿಖಿತವಾಗಿ ಮನವಿ ಮಾಡುತ್ತೇನೆ ಎಂದರು.

ಈ ಹಂತದಲ್ಲಿ ತಮಿಳುನಾಡಿನ ಪ್ರಕರಣ ಉದಾಹರಿಸಿದ ಸಿಂಘ್ವಿ ಅವರು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ದಿನ ನಿಗದಿ ಆಗುತ್ತಿದ್ದಂತೆ ಕೆಲ ಮಸೂದೆಗಳಿಗೆ ಅನುಮೋದನೆ ನೀಡಲಾಗಿದೆ, ಇಲ್ಲವೇ ರಾಷ್ಟ್ರಪತಿಯವರ ಪರಿಶೀಲನೆಗೆ ಒಪ್ಪಿಸಲಾಗಿದೆ ಎಂದು ಹೇಳಿದರು.

ರಾಜ್ಯಪಾಲರು ಯಾವಾಗ ಮಸೂದೆಗಳನ್ನು ವಾಪಸು ಕಳುಹಿಸಬಹುದು, ಯಾವಾಗ ರಾಷ್ಟ್ರಪತಿಯವರ ಪರಿಶೀಲನೆಗೆ ಕಳುಹಿಸಬಹುದು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ಸೂತ್ರಗಳನ್ನು ರಚಿಸಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಹಂತದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪ್ರತಿನಿಧಿಸಿದ್ದ ಮತ್ತೊಬ್ಬ ವಕೀಲ ಜೈದೀಪ್‌ ಗುಪ್ತಾ,  ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದೆ ಬರುತ್ತದೆ ಎಂದು ಗೊತ್ತಾದಂತೆ ಶುಕ್ರವಾರ ಬೆಳಿಗ್ಗೆಯಷ್ಟೇ ರಾಜ್ಯಪಾಲರು ಕೆಲ ಮಸೂದೆಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಒಪ್ಪಿಸಿದ್ದಾರೆ ಎಂದರು. ಈ ಕುರಿತ ಅಧಿಕೃತ ಮಾಹಿತಿ ಇಲ್ಲ. ಆದರೆ, ಇಂತಹ ಬೆಳವಣಿಗೆ ನಡೆದಿದೆ ಎಂದು ತಿಳಿದುಬಂದಿದೆ ಎಂದರು.

ಕೇರಳ ಸರ್ಕಾರವು ಈ ಸಂಬಂಧ ಸಲ್ಲಿಸಿರುವ ಅರ್ಜಿಯಲ್ಲಿ ರಾಜ್ಯಪಾಲರು ಒಟ್ಟು ಏಳು ಮಸೂದೆಗಳನ್ನು ಬಾಕಿಉಳಿಸಿಕೊಂಡಿದ್ದಾರೆ. ಇವುಗಳನ್ನು ಅವರೇ ಇತ್ಯರ್ಥಪಡಿಸಬಹುದಾಗಿದೆ. ಯಾವುದೇ ಮಸೂದೆಯೂ ರಾಜ್ಯ–ಕೇಂದ್ರ ಬಾಂಧವ್ಯಕ್ಕೆ ಸಂಬಂಧಿಸಿದ್ದಾಗಿಲ್ಲ ಎಂದು ಪೀಠದ ಗಮನಸೆಳೆದಿದೆ.

ರಾಷ್ಟ್ರಪತಿ ಭವನದ ಪರಿಶೀಲನೆಗೆ ಒಪ್ಪಿಸಲಾದ ಮಸೂದೆಗಳಿಗೆ ಅನುಮೋದನೆ ನೀಡುವ ಅಥವಾ ತಿರಸ್ಕರಿಸುವ ಕುರಿತು ರಾಷ್ಟ್ರಪತಿಯವರು ಎಷ್ಟು ದಿನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಸಂವಿಧಾನದಲ್ಲಿ ಸ್ಪಷ್ಟತೆ ಇಲ್ಲವಾಗಿದೆ ಎಂದು ಕೇರಳ ಸರ್ಕಾರ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.