ನವದೆಹಲಿ: ವಿಧಾನಸಭೆ ಒಪ್ಪಿಗೆ ನೀಡಿದ ಮಸೂದೆಗಳಿಗೆ ಅಂಕಿತ ಹಾಕಲು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಎಂದು ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರ ಕಚೇರಿಯಿಂದ ವಿವರಣೆ ಬಯಸಿ ನೋಟಿಸ್ ಜಾರಿ ಮಾಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ಡಿವಾಲ ಹಾಗೂ ಮಜೋಜ್ ಮಿಶ್ರಾ ಅವರಿದ್ದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಕೇರಳ ಸರ್ಕಾರದ ಪರ ಹಿರಿಯ ವಕೀಲ ಕೆ.ಕೆ ವೇಣುಗೋಪಾಲ್ ಅವರು ಹಾಜರಾದರು.
ಇದೊಂದು ವ್ಯಾಧಿಯಾಗಿಬಿಟ್ಟಿದೆ. ಸಂವಿಧಾನದ 168 ನೇ ವಿಧಿಯ ಅಡಿಯಲ್ಲಿ ಶಾಸಕಾಂಗದ ಭಾಗವಾಗಿದ್ದಾರೆಂದು ರಾಜ್ಯಪಾಲರು ತಿಳಿದುಕೊಂಡಿರುವುದಿಲ್ಲ ಎಂದು ವೇಣುಗೋಪಾಲ್ ಹೇಳಿದರು.
ಸಂವಿಧಾನದ 162ನೇ ವಿಧಿಯನ್ವಯ ರಾಜ್ಯಪಾಲರು ಶಾಸಕಾಂಗ ಭಾಗ. ಮೂರು ಸುಗ್ರೀವಾಜ್ಞೆಗಳಿಗೆ ಒಪ್ಪಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಬಳಿಕ ಅದರ ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ. ಸುಮಾರು 8 ಮಸೂದೆಗಳು ಕಳೆದ 7–21 ತಿಂಗಳಿನಿಂದ ರಾಜ್ಯಪಾಲರ ಬಳಿಯೇ ಇದೆ ಎಂದು ಕೆ.ಕೆ ವೇಣುಗೋಪಾಲ್ ಕೋರ್ಟ್‌ನ ಗಮನಕ್ಕೆ ತಂದರು.
ಕೇಂದ್ರ ಹಾಗೂ ರಾಜ್ಯಪಾಲರ ಕಚೇರಿಯ ಜತೆಗೆ, ವಿಚಾರಣೆ ಸಂಬಂಧ ನೀವು ಅಥವಾ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಹಾಯ ಮಾಡಬೇಕು ಎಂದು ಅಟಾರ್ನಿ ಜನರಲ್ ವಿ. ವೆಂಕಟರಮಣಿ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿತು. ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡುವ ಮೂಲಕ ರಾಜ್ಯಪಾಲರು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.