ADVERTISEMENT

ಯಮುನಾ ನದಿ ಸ್ವಚ್ಛತೆ: ಎನ್‌ಜಿಟಿ ಸಮಿತಿಯಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

ಪಿಟಿಐ
Published 19 ಜನವರಿ 2021, 11:34 IST
Last Updated 19 ಜನವರಿ 2021, 11:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಮುನಾ ನದಿಯ ನೀರಿನ ಗುಣಮಟ್ಟ ಸುಧಾರಣೆಗೆ ಮಾಡಿರುವ ಶಿಫಾರಸುಗಳೇನು ಮತ್ತು ಅದನ್ನು ಅಧಿಕಾರಿಗಳು ಯಾವ ರೀತಿ ಅನುಷ್ಠಾನಗೊಳಿಸಿದ್ದಾರೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಈ ನದಿಯ ನೀರು ಶುದ್ಧೀಕರಣ ಉಸ್ತುವಾರಿಗಾಗಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಚಿಸಿರುವ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಕೇಳಿದೆ.

ಯಮುನಾ ನದಿ ಸ್ವಚ್ಛಗೊಳಿಸಲು ಜುಲೈ 26,2018ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಎನ್‌ಜಿಟಿ ಮಾಜಿ ಅಧ್ಯಕ್ಷ ಬಿ.ಎಸ್‌.ಸಜ್ವಾನ್ ಮತ್ತು ದೆಹಲಿ ಸರ್ಕಾರದ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಶೈಲಜಾ ಚಂದ್ರ ಅವರನ್ನೊಳಗೊಂಡ ಸಮಿತಿ ರಚಿಸಿ, ನದಿ ಸ್ವಚ್ಛತೆ ಕುರಿತು ಕ್ರಿಯಾ ಯೋಜನೆ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ಅಮಿಕಸ್ ಕ್ಯೂರಿ ಮತ್ತು ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು, ‘ಎನ್‌ಜಿಟಿ ನೇಮಿಸಿದ ಸಮಿತಿ ಯಮುನಾ ನದಿ ನೀರನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ಬಗ್ಗೆ ನಿಗಾವಹಿಸುತ್ತಿದೆ‘ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬಡೆ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ADVERTISEMENT

ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆಯಲ್ಲಿ, ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ವಿನೀತ್ ಸರನ್ ಅವರನ್ನೊಳಗೊಂಡ ನ್ಯಾಯಪೀಠ, ಯಮುನಾ ನದಿ ನೀರಿನ ಗುಣಮಟ್ಟ ಸುಧಾರಣೆಗೆ ಏನೇನು ಶಿಫಾರಸುಗಳನ್ನು ಮಾಡಿದೆ ಮತ್ತು ಅವು ಎಷ್ಟು ಪ್ರಮಾಣದಲ್ಲಿ ಜಾರಿಗೆ ಬಂದಿವೆ ಎಂಬುದರ ಕುರಿತು ವರದಿ ಸಲ್ಲಿಸುವಂತೆ ಸಮಿತಿಯನ್ನು ಕೇಳಿದೆ.

ಈ ಹಿಂದೆ, ದೇಶದಾದ್ಯಂತ ಮಾಲಿನ್ಯದಿಂದಾಗಿ ನದಿಗಳು ಮಲಿನಗೊಳ್ಳುತ್ತಿವೆ ಎಂಬುದನ್ನು ಅರಿತ ಸುಪ್ರೀಂ ಕೋರ್ಟ್‌, ಮೊದಲು ಯಮುನಾ ನದಿಯ ಮಾಲಿನ್ಯ ಕುರಿತ ವಿಚಾರಣೆಯನ್ನು ತೆಗೆದುಕೊಳ್ಳಲು ನಿರ್ಧರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.