ನವದೆಹಲಿ : ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸಂಬಂಧ ಮಾಧ್ಯಮಗಳ ಜತೆ ಮಾತನಾಡಿದ ಅಧಿಕಾರಿಗಳಿಬ್ಬರನ್ನು ಸುಪ್ರೀಂ ಕೋರ್ಟ್ ಮಂಗಳವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಎನ್‌ಆರ್‌ಸಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಅನುಮತಿ ಇಲ್ಲದೆ ಮಾಧ್ಯಮಗಳ ಜತೆ ಮಾತನಾಡದಂತೆ ರಿಜಿಸ್ಟ್ರಾರ್ ಜನರಲ್ (ಆರ್‌ಜಿಐ) ಮತ್ತು ಅಸ್ಸಾಂನ ಎನ್‌ಆರ್‌ಸಿ ಸಂಯೋಜಕರಿಗೆ ತಾಕೀತು ಮಾಡಿದೆ.
ಒಂದು ವೇಳೆ ಮಾಧ್ಯಮಗಳ ಜತೆ ಮಾತನಾಡಿದರೆ ‘ನ್ಯಾಯಾಂಗ ನಿಂದನೆ’ ಆರೋಪದ ಮೇಲೆ ಜೈಲಿಗೆ ಕಳಿಸುವುದಾಗಿ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ಆರ್.ಎಫ್. ನಾರಿಮನ್ ಅವರಿದ್ದ ಪೀಠ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಎನ್‌ಆರ್‌ಸಿ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದವರ ಅಹವಾಲು ಸ್ವೀಕಾರ ಮತ್ತು ಹೆಸರು ಸೇರ್ಪಡೆ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಿಜಿಸ್ಟ್ರಾರ್ ಜನರಲ್ ಶೈಲೇಶ್ ಮತ್ತು ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರಿಗೆ ‘ಹದ್ದು ಮೀರಿ’ ವರ್ತಿಸದಂತೆ ಕಿವಿ ಹಿಂಡಿದೆ.
‘ಅಧಿಕಾರ ವ್ಯಾಪ್ತಿ ಮೀರಿ ಅಧಿಕಾರಿಗಳು ಎನ್‌ಆರ್‌ಸಿ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಅತ್ಯಂತ ದುರದೃಷ್ಟಕರ. ಸಂಬಂಧಿಸದ ವಿಷಯದ ಬಗ್ಗೆ ಮಾತನಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ನ್ಯಾಯಮೂರ್ತಿ ಗೊಗೊಯಿ ಪ್ರಶ್ನಿಸಿದರು.
ಅಧಿಕಾರಿಗಳಿಗೆ ಪತ್ರಿಕೆ ಓದುವ ಶಿಕ್ಷೆ:ಎನ್‌ಆರ್‌ಸಿಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಕೋರ್ಟ್ ಹಾಲ್‌ನಲ್ಲಿಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಓದಿ ಹೇಳುವಂತೆ ಅವರು,ಇಬ್ಬರೂ ಅಧಿಕಾರಿಗಳಿಗೆ
ಸೂಚಿಸಿದರು.
‘ನೀವು ನ್ಯಾಯಾಲಯದ ಅಧೀನಕ್ಕೆ ಒಳಪಟ್ಟ ಅಧಿಕಾರಿಗಳು ಎಂಬುವುದನ್ನು ಮರೆಯಬೇಡಿ. ನ್ಯಾಯಾಲಯದ ಆದೇಶದಂತೆ ಕೆಲಸ ಮಾಡಬೇಕು. ಅದನ್ನು ಬಿಟ್ಟು ಸರ್ವ ಸ್ವತಂತ್ರರಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡುವುದು ನಿಮ್ಮ ಕೆಲಸವಲ್ಲ. ಅಂತಹ ಉದ್ಧಟತನ ತೋರಬೇಡಿ’ ಎಂದು ಅಧಿಕಾರಿಗಳ ನೀರಿಳಿಸಿದರು.
‘ನ್ಯಾಯಾಂಗ ನಿಂದನೆ ಆರೋಪದ ಮೇಲೆ ನಿಮ್ಮನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಜೈಲಿಗೆ ಕಳಿಸಬೇಕು. ಇದರಿಂದ ಎನ್‌ಆರ್‌ಸಿ ಅಂತಿಮ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಅಡ್ಡಿಯಾಗುತ್ತದೆ. ಇದೊಂದು ಬಾರಿ ನಿಮ್ಮ ತಪ್ಪನ್ನು ಮನ್ನಿಸಿ ಕ್ಷಮಾಪಣೆ ನೀಡುತ್ತೇವೆ’ಎಂದು ನ್ಯಾಯಮೂರ್ತಿಗಳು ಹೇಳಿದರು.
ಸುಪ್ರೀಂ ಕೋರ್ಟ್ ಚಾಟಿ ಏಟಿಗೆ ಹೈರಾಣಾದ ಆರ್‌ಜಿಐ ಶೈಲೇಶ್ ಮತ್ತು ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಅವರು ಬೇಷರತ್ತಾಗಿ ಕೋರ್ಟ್ ಕ್ಷಮಾಪಣೆಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.