ADVERTISEMENT

ಅಂಡಮಾನ್ CS ಅಮಾನತು, LGಗೆ ದಂಡ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಪಿಟಿಐ
Published 4 ಆಗಸ್ಟ್ 2023, 6:56 IST
Last Updated 4 ಆಗಸ್ಟ್ 2023, 6:56 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ತನ್ನ ಆದೇಶ ಪಾಲಿಸಲು ವಿಫಲವಾದ ಅಂಡಮಾನ್‌ ಹಾಗೂ ನಿಕೋಬಾರ್‌ ಆಡಳಿತದ ಮುಖ್ಯಕಾರ್ಯದರ್ಶಿಯನ್ನು ಅಮಾನತು ಮಾಡಿದ ಹಾಗೂ ಲೆಫ್ಟಿನೆಂಟ್ ಗವರ್ನರ್‌ ಅವರಿಗೆ ದಂಡ ವಿಧಿಸಿದ ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್‌ ಬ್ಲೇಯರ್‌ ಪೀಠದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌, ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಹಾಗೂ ನ್ಯಾಯಮೂರ್ತಿ ಮನೋಜ್‌ ಮಿಶ್ರಾ ಅವರಿದ್ದ ಪೀಠ ಹೈಕೋರ್ಟ್‌ನ ಆದೇಶಕ್ಕೆ ತಡೆ ನೀಡಿದೆ.

‘ಈ ನಿರ್ದೇಶನಕ್ಕೆ ನಾವು ತಡೆ ನೀಡುತ್ತೇವೆ. ಹೀಗೊಂದು ಆದೇಶ ಪಡೆಯಲು ನೀವು ನಿಜವಾಗಿಯೂ ನ್ಯಾಯಾಧೀಶರನ್ನು ಕೆರಳಿಸಿರಬೇಕು ಎಂದು ಅರ್ಜಿದಾರರನ್ನು ಉದ್ದೇಶಿಸಿ ಹೇಳಿದ ನ್ಯಾಯಾಲಯವು, ಮುಂದಿನ ಶುಕ್ರವಾರ ವಿಚಾರಣೆ ನಡೆಸುವುದಾಗಿ ಹೇಳಿತು.

ADVERTISEMENT

ಘಟನೆ ಏನು?

ದಿನಗೂಲಿ ಕಾರ್ಮಿಕರಿಗೆ ಹೆಚ್ಚಿನ ವೇತನ ಹಾಗೂ ತುಟ್ಟಿ ಭತ್ಯೆ ಪಾವತಿ ಮಾಡಬೇಕು ಎನ್ನುವ ತನ್ನ ಆದೇಶ ಉಲ್ಲಂಘಿಸಿದಕ್ಕೆ ಅಂಡಮಾನ್ ನಿಕೋಬಾರ್‌ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಕೇಶವ್‌ ಚಂದ್ರ ಅವರನ್ನು ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್‌ ಬ್ಲೇಯರ್‌ ಪೀಠ ಅಮಾನತು ಮಾಡಿ, ಲೆಫ್ಟಿನೆಂಟ್‌ ಗವರ್ನರ್‌ ಡಿ.ಕೆ ಜೋಶಿಗೆ ₹5 ಲಕ್ಷ ದಂಡ ವಿಧಿಸಿತ್ತು.

ಕೇಂದ್ರಾಡಳಿತ ಪ್ರದೇಶದ ಆಡಳಿತಡಿಯಲ್ಲಿದ್ದ ಸುಮಾರು 4,000 ದಿನಗೂಲಿ ಕಾರ್ಮಿಕರಿಗೆ (Daily Rated Mazdoors) ವೇತನ ಹಾಗೂ ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ 19ನಲ್ಲಿ ಆದೇಶಿಸಿತ್ತು. ಆದರೆ ಅದನ್ನು ಪಾವತಿ ಮಾಡಲು ಆಡಳಿತ ವಿಫಲವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.